ನಾಪೋಕ್ಲು: ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಸಲಹೆ ನೀಡಿದರು.
ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದ್ದೂರು ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮೂರು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳಿಗೆ ಉತ್ತಮ ಆರೋಗ್ಯ ಆಹಾರ ಹಾಗೂ ಸರ್ಕಾರದಿಂದ ಅನುಷ್ಠಾನಗೊಂಡ ಯೋಜನೆಗಳ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಮಾತನಾಡಿ, ಅಂಗನವಾಡಿ ಕೇಂದ್ರಕ್ಕೆ ಮೂರು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳನ್ನು ದಾಖಲು ಮಾಡಿಸಿ ಇಲಾಖೆ ನೀಡುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ ಮಾತನಾಡಿ, ಅರ್ಹ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗಬಾರದು. ವಿದ್ಯೆ, ವಿನಯವನ್ನು ಮೊದಲು ಅಂಗನವಾಡಿ ಕೇಂದ್ರದಲ್ಲಿ ಪಡೆಬೇಕು ಎಂದು ಆಶಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಕುಸುಮಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮೀ ಮಾತನಾಡಿದರು. ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಸರಸ್ವತಿ, ಇಂಜಿನಿಯರ್ ಕುಮಾರಿ ನವಾನಿ ಹಾಗೂ ಸಾಮಗ್ರಿ ಸರಬರಾಜುದಾರ ಕರುಣಾಕರ್ ರೈ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಅನುರಾವತಿ, ಸದಸ್ಯರಾದ ಹಮೀದ್, ಮೊಣ್ಣಪ್ಪ, ಸರಸು, ಲಕ್ಷ್ಮೀ, ಮಡಿಕೇರಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪವಿತ್ರಾ, ಕಾರ್ಯದರ್ಶಿ ಆಶಾಲತಾ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಮಮತಾ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶೋಭಾ, ಸಹಾಯಕಿ ಸುಜಾತಾ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು, ಸಹಾಯಕಿಯರು, ಪಾಲಕರು, ಸಾರ್ವಜನಿಕರು ಹಾಜರಿದ್ದರು.