ಹಲಗೂರು: ಸರ್ಕಾರದಿಂದ ಸಿಗುವ ರೇಷ್ಮೆ ಇಲಾಖೆ ಸೌಲಭ್ಯಗಳಾದ ರೇಷ್ಮೆ ಹುಳು ಸಾಕಾಣಿಕ ಮನೆ, ನೀರಾವರಿ, ನರೇಗಾ ಯೋಜನೆಯಡಿ ಇಲಾಖೆಯ ಸವಲತ್ತುಗಳನ್ನು ಪಡೆದು ರೇಷ್ಮೆ ಬೆಳೆಗಾರರು ಸದೃಢವಾಗಬೇಕೆಂದು ಮಳವಳ್ಳಿ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕ ಎಸ್.ಸಿ .ಸುರೇಶ್ ರೈತರಿಗೆ ಕರೆ ನೀಡಿದರು.
ಸಮೀಪದ ಕೋಡಿಪುರ ಗ್ರಾಮದಲ್ಲಿ ಮಂಗಳವಾರ ಮದ್ದೂರಿನ ರೇಷ್ಮೆ ಸಂಶೋಧನಾ ವಿಸ್ತರಣಾ ಕೇಂದ್ರ ಉಪ ಘಟಕ, ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ ಸಹಯೋಗದೊಂದಿಗೆ ಆಯೋಜಿಸಿದ್ದ ರೈತರ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೇಷ್ಮೆ ಇಲಾಖೆ ಶಿಫಾರಸ್ಸು ಮಾಡಿರುವಂತಹ ಔಷಧಗಳನ್ನು ತೋಟಕ್ಕೆ ಬಳಸಬೇಕು. ಸರ್ಕಾರಿ ರೇಷ್ಮೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವ ದ್ವಿತಳಿ ಗೂಡಿಗೆ 30 ರೂ.ನಂತೆ ಪ್ರೋತ್ಸಾಹಧನ ನೀಡಿದ್ದು, ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಿ ಎಂದರು.
ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಭಾಗ್ಯಾ ಅವರು ಇತ್ತೀಚಿನ ದಿನಗಳಲ್ಲಿ ರೇಷ್ಮೆ ಬೆಳೆಗಳಿಗೆ ತಗಲುವ ರೋಗಗಳು ಮತ್ತು ಅವುಗಳನ್ನು ನಿವಾರಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಅಧಿಕಾರಿ ಶಿವಕುಮಾರ್ ಮಾತನಾಡಿ, ಈ ಭಾಗದಲ್ಲಿ ರೇಷ್ಮೆ ಗಿಡಗಳಿಗೆ ರೋಗ ಹೆಚ್ಚಾಗಿದೆ. ರೈತರು ಬೇರು ಕೊಳೆ ರೋಗ ಇರುವಂತಹ ನಿಮ್ಮ ತೋಟದಲ್ಲಿ ರೋಗಭಾದಿತ ಬುಡಗಳಿಗೆ ‘ಸಾಫ್’ ಎಂಬ ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಎರಡು ಗ್ರಾಂನಂತೆ ರೋಗ ಇರುವಂತಹ ಬುಡಗಳಿಗೆ ಒಂದು ಲೀಟರ್ ಮಿಶ್ರಿತ ದ್ರಾವಣವನ್ನು ಸುರಿಯಬೇಕು ಎಂದು ಮಾಹಿತಿ ನೀಡಿದರು.
ವಿಜ್ಞಾನಿ ಮೇಘಲಾದೇವಿ ಅವರು ತೋಟಗಳಿಗೆ ತಗಲುವ ನುಸಿ ರೋಗ ಮತ್ತು ಶುಕ್ರ ರೋಗಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.
ಹಲಗೂರಿನ ರೇಷ್ಮೆ ಕೃಷಿ ವಿಸ್ತರಣಾ ಅಧಿಕಾರಿ ಜೆ.ವಿ.ಶ್ರೀನಿವಾಸಗೌಡ ಮತ್ತು ರೇಷ್ಮೆ ನಿರೀಕ್ಷಕ ಬಿ.ಆರ್.ಕಿರಣ್ ಇದ್ದರು.