ಜಿಲ್ಲೆ

ಚೈತನ್ಯ ಶಿಬಿರದ ಸದುಪಯೋಗ ಪಡೆಯಿರಿ: ಕೆ.ಜಿ.ವಿಮಲ

ಮಡಿಕೇರಿ: ಮೆದುಳುವಾತಯುಳ್ಳ ವಿಶೇಷಚೇತನ ಮಕ್ಕಳಿಗೆ ಹಾಗೂ ಪಾಲಕರಿಗೆ ಹಮ್ಮಿಕೊಂಡಿರುವ ವಸತಿಯುತ ಚೈತನ್ಯ ಶಿಬಿರದ ಸದುಪಯೋಗಪಡಿಸಿಕೊಳ್ಳುವಂತೆ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ ಹೇಳಿದರು.


ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ರೋಟರಿ ಕ್ಲಬ್ ಕುಶಾಲನಗರ ಮತ್ತು ಗ್ರಾಮ ಪಂಚಾಯಿತಿ ಮುಳ್ಳುಸೋಗೆ ಸಹಭಾಗಿತ್ವದಲ್ಲಿ ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆಯ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ವಸತಿಯುತ ಚೈತನ್ಯ ಶಿಬಿರ ಹಮ್ಮಿಕೊಂಡಿರುವುದು ಒಂದು ಉತ್ತಮ ಕೆಲಸವಾಗಿದೆ. ಇದರ ಸದುಪಯೋಗವನ್ನು ಮೆದುಳುವಾತಯುಳ್ಳ ವಿಶೇಷಚೇತನ ಮಕ್ಕಳು ಹಾಗೂ ಪಾಲಕರು ಪಡೆದುಕೊಳ್ಳುವಂತೆ ತಿಳಿಸಿದ ಅವರು, ಇಲಾಖೆಯ ವತಿಯಿಂದ ವಿಶೇಷಚೇತನರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.


ಕುಶಾಲನಗರ ರೋಟರಿ ಕ್ಲಬ್‌ನ ಅಸಿಸ್ಟೆಂಟ್ ಗವರ್ನರ್ ಎಸ್.ಕೆ.ಸತೀಶ್ ಮಾತನಾಡಿ, ಚೈತನ್ಯ ಶಿಬಿರವು ಮಕ್ಕಳ ಪೂರಕ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಶಿಬಿರಕ್ಕೆ ರೋಟರಿ ಕ್ಲಬ್ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ನಾಲ್ಕು ದಿನಗಳ ಕಾಲ ನಡೆಯುವ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಖಜಾಂಚಿ ಡಾ.ಕೆ.ಎನ್.ಚಂದ್ರಶೇಖರ್ ವಹಿಸಿದ್ದರು. ಕುಶಾಲನಗರ ರೋಟರಿ ಕ್ಲಬ್‌ನ ಅಧ್ಯಕ್ಷ ಉಲ್ಲಾಸ್ ಕೃಷ್ಣ, ಮೈಸೂರಿನ ಕಾವೇರಿ ಆಸ್ಪತ್ರೆಯ ಫಿಸಿಯೋಥೆರಪಿಸ್ಟ್ ಎಸ್.ವಿ.ರಾಹುಲ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆಯ ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ, ಕಮಿಟಿ ಸದಸ್ಯ ರಂಗಸ್ವಾಮಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ ೧೩ ಮೆದುಳುವಾತಯುಳ್ಳ ವಿಶೇಷಚೇತನ ಮಕ್ಕಳು ಹಾಗೂ ಪಾಲಕರು ಭಾಗವಹಿಸಿದ್ದರು.