ವಿಜಯಪುರ: ಮಹಾರಾಷ್ಟ್ರ ಸರ್ಕಾರದ ಒತ್ತಡಕ್ಕೆ ಮಣಿಯದೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟ 524.256ಕ್ಕೆ ನಿಲ್ಲಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂ ಹಾಗೂ ಹಸೀರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ರೈತ ಮುಖಂಡರಾದ ಅರವಿಂದ ಕುಲಕರ್ಣಿ, ವಿಜಯ ಪೂಜಾರ ಮಾತನಾಡಿ, ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು 524.256ಕ್ಕೆ ನಿಲ್ಲಿಸಲು ಗೇಟ್ ಅಳವಡಿಸದಂತೆ ಇತ್ತೀಚಿಗೆ ಮಹಾರಾಷ್ಟ್ರದ ವಿವಿಧೆಡೆ ರೈತರು ಹೋರಾಟ ಮಾಡುತ್ತಿದ್ದಾರೆ.
ಜಲಾಶಯದ 524.256ಕ್ಕೆ ನೀರು ನಿಲ್ಲಿಸಿದರೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳು ಲಾಲ್ಬಹದೂರ್ ಶಾಸಿ ಜಲಾಶಯದ ಹಿನ್ನೀರಿನಿಂದ ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ ಎಂದು ತಪ್ಪು ತಿಳುವಳಿಕೆಯಿಂದ ಹೋರಾಟ ನಡೆಸಿದ್ದಾರೆ ಎಂದು ದೂರಿದರು.
ಮಹಾರಾಷ್ಟ್ರ ಸರ್ಕಾರವು ಈ ವಿಷಯವಾಗಿ ನಿವೃತ್ತ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿದ್ದು, ಪ್ರವಾಹ ಪರಿಸ್ಥಿತಿ ಕುರಿತು ಅಧ್ಯಯನ ಕೈಗೊಂಡು ಸಮಿತಿ ವರದಿ ನೀಡಿ, ಆಲಮಟ್ಟಿ ಜಲಾಶಯದ ನೀರಿನ ಮಟ್ಟ 519.60ಕ್ಕೆ ನಿಲ್ಲಿಸಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಮಹಾರಾಷ್ಟ್ರ ಸರ್ಕಾರದ ಒತ್ತಡಕ್ಕೆ ಮಣಿಯದೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು 524.256ಕ್ಕೆ ನೀರು ನಿಲ್ಲಿಸಲು ಕೂಡಲೇ ಗೇಟ್ ಅಳವಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ವಿಠಲ ಬಿರಾದಾರ, ರಾಜೇಸಾಬ ವಾಲಿಕಾರ, ದಾವಲಸಾಬ ನದಾಫ್, ಗುರುಲಿಂಗಪ್ಪ ಪಡಸಲಗಿ, ನಾಗಪ್ಪ ಬೂದಗೊಳಿ, ಶ್ರೀಶೈಲ ಕೂರನದ, ಮಲ್ಲಪ್ಪ ಪಡಸಲಗಿ, ಲಾಲಸಾಬ ಹಳ್ಳೂರ, ರೇವಪ್ಪಗೌಡ ಪೋಲೇಶಿ, ಮಲಿಗೆಪ್ಪ ಸಾಸನೂರ, ಸಿದ್ಲಿಂಗಪ್ಪ ಬಿರಾದಾರ, ಶಾರದಾ ಕಾಳನ್ನವರ, ಸುಜಾತಾ ವಡ್ಡರ, ಗುರುಬಸಮ್ಮ ಡವಳಗಿ, ರೇವತಿ ಬಡಿಗೇರ, ಚೇತನ ಗೌಡರ ಮತ್ತಿತರರಿದ್ದರು.