ಹುತ್ತೂರಿನಲ್ಲಿ ಆಯೋಜಿಸಿದ್ಧ ಗ್ರಾಮ ಸಭೆಯಲ್ಲಿ ಅಂಗವಾಡಿ ಕಾರ್ಯಕರ್ತೆಯರು ಸಮಸ್ಯೆ ಹೇಳಿಕೊಂಡರು. ನಾರಾಯಣ್, ರೇಖಾ, ಪುಟ್ಟವೀರನಾಯ್ಕ ಇತರರು ಇದ್ದರು.  
ಜಿಲ್ಲೆ

ನರೇಗಾ ಕಾಮಗಾರಿ ಹಣ ವಸೂಲಾತಿಗೆ ಕ್ರಮವಹಿಸಿ

ಹನೂರು: ಹುತ್ತೂರು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಆಕ್ಷೇಪಣೆ ಸಲ್ಲಿಸಿದ್ದ 2 ಕಾಮಗಾರಿಗಳನ್ನು ಹೊರತುಪಡಿಸಿದರೆ ಬಹುತೇಕ ಕಾಮಗಾರಿಗಳಲ್ಲಿ ಹಣ ವಸೂಲಾತಿಯಾಗಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ತಾಲೂಕು ನರೇಗಾ ಸಂಯೋಜಕ ನಾರಾಯಣ್ ತಿಳಿಸಿದರು.

ತಾಲೂಕಿನ ಹುತ್ತೂರು ಗ್ರಾಪಂ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣಾ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯಲ್ಲಿ ಮಾತನಾಡಿದರು.

ನರೇಗಾ ಯೋಜನೆಯಡಿ ಪ್ರತಿಯೊಬ್ಬರು ಉದ್ಯೋಗ ಪಡೆಯಬಹುದಾಗಿದ್ದು, ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ 133 ಕಾಮಗಾರಿಗಳು ನಡೆದಿದ್ದು, 1.8 ಕೋಟಿ ರೂ. ವ್ಯಯಿಸಲಾಗಿದೆ. ಇನ್ನು 2009-10ನೇ ಸಾಲಿನಿಂದ ಈವರೆಗೂ ನಡೆದಿರುವ ಕಾಮಗಾರಿಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಆಕ್ಷೇಪಣೆಗಳಲ್ಲಿ ಬಹುತೇಕ ಇತ್ಯರ್ಥವಾಗಿಲ್ಲ. 2021-22ನೇ ಸಾಲಿನಲ್ಲಿ 3,772 ರೂ. ಹಾಗೂ 2022-23ನೇ ಸಾಲಿನಲ್ಲಿ ಹುತ್ತೂರು ಗ್ರಾಮದಲ್ಲಿ ಕೈಗೊಳ್ಳಲಾಗಿದ್ದ ಕಾಮಗಾರಿಯಲ್ಲಿ 1,61,860 ರೂ. ಹಣವನ್ನು ಹೊರತುಪಡಿಸಿದರೆ ಇನ್ನುಳಿದ ಕಾಮಗಾರಿಗಳ ಹಣ ಸರ್ಕಾರಕ್ಕೆ ವಸೂಲಾತಿ ಆಗಿಲ್ಲ. ಇನ್ನು ಕಳೆದ ಸಭೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಸೂಚಿಸಿದ್ದ ಸರ್ಕಾರಿ ಶಾಲೆಯ ಆವರಣದಲ್ಲಿನ ಹುಣಸೆಮರ ತೆರವುಗೊಳಿಸುವ ಕಾರ್ಯ ಪೂರ್ಣವಾಗಿಲ್ಲ. ಮಾನಸ ಸರೋವರ ಯೋಜನೆಯಡಿ 1.81 ಲಕ್ಷ ರೂ. 3.85 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ ಸಂಬಂಧ ಗ್ರಾಪಂನಲ್ಲಿ ಅಳತೆ ಪುಸ್ತಕ ಲಭ್ಯವಾಗಿಲ್ಲ. ಈ ಬಗ್ಗೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಜನರ ಸಮಸ್ಯೆ: ಇನ್ನು ಸಭೆಯಲ್ಲಿ ಕೆಲವರು ನಡೆದಿರುವ ಕೆಲವೊಂದು ಕಾಮಗಾರಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ತಿಳಿಸಿದರೆ, ಕೆಲ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರಕ್ಕೆ ವಿದ್ಯುತ್ ಹಾಗೂ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು. ಗುಂಡಿಮಾಳ ಗ್ರಾಮದಲ್ಲಿ ಶಾಲೆ ಸಮೀಪವಿರುವ ರಸ್ತೆಯು ಹದಗೆಟ್ಟಿದ್ದು, ತಿರುಗಾಡಲು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಜನರಿಂದ ಒತ್ತಾಯ ಕೇಳಿ ಬಂತು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ರೇಖಾ, ಸದಸ್ಯರಾದ ಪುಟ್ಟವೀರನಾಯ್ಕ, ಬಸವರಾಜು, ಗಿರಿಜಮ್ಮ, ಪಶು ಪಾಲನಾ ಇಲಾಖೆ ರಾಜೇಂದ್ರ ಹಾಗೂ ಇನ್ನಿತರರು ಇದ್ದರು.