ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ಕ್ರಮವಹಿಸುವಂತೆ ಇಲಾಖೆ ಅಧಿಕಾರಿಗಳಿಗೆ ಜಿಪಂ ಸಿಇಒ ಭುವನೇಶ ಪಾಟೀಲ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ 146 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವಂತೆ ಎಲ್ಲ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಸಮಸ್ಯಾತ್ಮಕ ಗ್ರಾಮಗಳಲ್ಲಿ ಅವಶ್ಯಕತೆ ಇದ್ದಲ್ಲಿ ಟ್ಯಾಂಕರ್ ಮೂಲಕ ಅಥವಾ ಬಾಡಿಗೆ ಅಧಾರದ ಮೇಲೆ ಖಾಸಗಿ ಬೋರವೆಲ್ ಮೂಲಕ ನೀರು ಪಡೆದು ನೀರಿನ ವ್ಯವಸೆ ಕಲ್ಪಿಸಬೇಕು. ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಕ್ರಮವಹಿಸುವ ಬಗ್ಗೆ ಪಶುಪಾಲನಾ ಹಾಗೂ ಪಶು ವೈದ್ಯಕಿಯ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿ, ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಅಗತ್ಯ ಮೇವು ದಾಸ್ತಾನು ಶೇಖರಿಸಿ ಅಗತ್ಯವಿರುವ ಗ್ರಾಮಗಳಿಗೆ ಸರಬರಾಜು ಮಾಡಲು ನಿರ್ದೇಶನ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ತಾಪಂ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರು, ಪಶುಪಾಲನೆ ಹಾಗೂ ಪಶು ವೈದ್ಯಕಿಯ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು, ಇತರರು ಇದ್ದರು.