ಜಿಲ್ಲೆ

ಮೇವಿನ ಕೊರತೆಯಾಗದಂತೆ ಕ್ರಮವಹಿಸಿ: ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಸೂಚನೆ

ಮೈಸೂರು: ಮುಂದಿನ 6 ತಿಂಗಳವರೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಆನಂತರವೂ ಕೊರತೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಚರ್ಮಗಂಟು ರೋಗ ಮತ್ತೆ ಉಲ್ಬಣವಾಗದಂತೆಯೂ ನೋಡಿಕೊಳ್ಳಬೇಕು ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ದೇವರಾಜ ಅರಸು ಸಭಾಂಗಣದಲ್ಲಿ ಶುಕ್ರವಾರ ಮೈಸೂರು ವಿಭಾಗದ ಪಶುಸಂಗೋಪನಾ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಪಶುಗಳಿಗೆ ಬರುವ ರೋಗಗಳ ಬಗ್ಗೆ ವೈದ್ಯರು ಎಚ್ಚರ ವಹಿಸಬೇಕು. ಪ್ರಸ್ತುತ ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸುತ್ತಿದೆ. ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಹೆಚ್ಚು ಕಂಡುಬರುತ್ತಿದೆ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ರೋಗದ ಮೇಲೆ ನಿಗಾ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವ ಹಳ್ಳಿಗಳಲ್ಲಿ ರೋಗ ಹೆಚ್ಚಿದೆ ಎಂಬುದನ್ನು ಗಮನಿಸಿ, ಸುತ್ತಮುತ್ತಲಿನ ಊರುಗಳ ಮೇಲೂ ನಿಗಾ ವಹಿಸಬೇಕು ಎಂದರು.

ಇಲಾಖೆಯ ಉಪ ನಿರ್ದೇಶಕರು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾಲುಬಾಯಿ ಜ್ವರ, ಕಂದುರೋಗಗಳಿಗೆ ಸಕಾಲದಲ್ಲಿ ಲಸಿಕೆ ಹಾಕಬೇಕು. ಕೆಲವು ರೈತರು ಚರ್ಮಗಂಟು ರೋಗದಿಂದ ಮೃತಪಟ್ಟ ರಾಸುಗಳಿಗೆ ಪರಿಹಾರ ಬಂದಿಲ್ಲವೆಂದು ದೂರುತ್ತಿದ್ದಾರೆ. ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು.

ಮೇವು ಕೊರತೆಯಾಗದಂತೆ ಎಚ್ಚರ ವಹಿಸಿ: ಈ ಬಾರಿ ಸರಿಯಾಗಿ ಮಳೆಯಾಗದ ಕಾರಣ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ ಇದೆ. ಆದರೂ ಮುಂದಿನ 6 ತಿಂಗಳವರೆಗೆ ಮೇವಿನ ಕೊರತೆ ಇಲ್ಲ. ಆನಂತರವೂ ಕೊರತೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಏಪ್ರಿಲ್-ಮೇ ತಿಂಗಳ ನಂತರ ಮೇವಿನ ಕೊರತೆ ಎದುರಾಗಬಹುದು. ಮೇವು ಖರೀದಿಗೆ ಹಣದ ಕೊರತೆ ಇಲ್ಲ. ಅಧಿಕಾರಿಗಳು ಮುಂಜಾಗ್ರತೆ ವಹಿಸಿ ಮೇವು ಶೇಖರಣೆ ಮಾಡುವಂತೆ ಸೂಚಿಸಿದರು.

ರೈತರ ಬಳಿ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಿಕೊಂಡು ಮೇವು ಬೆಳೆಯುವ ಮಿನಿ ಕಿಟ್‌ಗಳನ್ನು ವಿತರಣೆ ಮಾಡಬೇಕು ಎಂದು ಸಚಿವರು ಹೇಳಿದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಹಿಂ, ಅವಶ್ಯವಿರುವ ಮಿನಿ ಕಿಟ್‌ಗಳ ಬಗ್ಗೆ ನಿಖರವಾದ ಮಾಹಿತಿ ಕೊಡುವಂತೆ ಸೂಚಿಸಿದರು.