ಜಿಲ್ಲೆ

ಮಳೆಹಾನಿ ತಡೆಗೆ ಕ್ರಮ ವಹಿಸಿ : ಮೈಸೂರು ಡಿಸಿ ನಿರ್ದೇಶನ

ಸದೇಶ್ ಕಾರ್ಮಾಡ್

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಳೆಯಿಂದ ಆಗುವ ಹಾನಿ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ನಿರ್ದೇನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಸುರಿಯುತ್ತಿದೆ. ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ತಹಶೀಲ್ದಾರ್‌ಗಳು ತಮ್ಮ ಹಂತದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಳೆ ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕು. ಮಳೆಯಿಂದ ಬೆಳೆ ಹಾನಿ ಆದರೆ ಒಂದು ವಾರದಲ್ಲಿ ಬೆಳೆ ಹಾನಿ ಕುರಿತು ವರದಿಯನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮನೆ ಹಾನಿ ಸಂಬಂಧ ವಾಸ್ತವಾಂಶ ಆಧಾರದ ಮೇಲೆ ಸಮರ್ಪಕವಾಗಿ ವರದಿ ನೀಡಬೇಕು, ವರದಿ ಆಧಾರದ ಮೇಲೆ ಪರಿಹಾರ ನೀಡಲು ಪಿಡಿ ಖಾತೆಯಲ್ಲಿ ಹಣವಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಕಬಿನಿ ಜಲಾಶಯ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚಿನ ಪ್ರವಾಹ ಬರುವ ಸಾಧ್ಯತೆಗಳು ಹೆಚ್ಚು. ಕಳೆದ ಬಾರಿ ಯಾವೆಲ್ಲ ಗ್ರಾಮಗಳಲ್ಲಿ ಹೆಚ್ಚಿನ ಹಾನಿ ಆಗಿತ್ತು ಆ ಗ್ರಾಮಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ತಿ.ನರಸೀಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರವಾಹ ಬರುವ ಸಾಧ್ಯತೆಗಳು ಇವೆ. ಆ ಗ್ರಾಮಗಳಲ್ಲಿ ಪ್ರವಾಹ ಬಂದರೆ ಜನರ ಸ್ಥಳಾಂತರ, ಗಂಜಿ ಕೇಂದ್ರಗಳ ತೆರೆಯುವ ಕುರಿತು ಪೂರ್ವಸಿದ್ಧತೆ ಮಾಡಿಕೊಳ್ಳಿ. ಮಳೆಯಿಂದ ಯಾವುದೇ ಪ್ರಾಣ ಹಾನಿ ಆದರೆ ಪರಿಹಾರ 24 ಗಂಟೆಯೊಳಗೆ ಕುಟುಂಬಸ್ಥರಿಗೆ ಪರಿಹಾರ ತಲುಪಬೇಕು ಎಂದು ತಹಶೀಲ್ದಾರ್ ಸೂಚನೆ ನೀಡಿದರು.

ಮಳೆಗಾಲದಲ್ಲಿ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಗಳು ಹೆಚ್ಚು ಇದ್ದು, ಈ ಬಗ್ಗೆ ಸೆಸ್ಕ್ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು. ವಿದ್ಯುತ್ ಅಡಚಣೆ ಆದರೆ ತಕ್ಷಣ ರಿಪೇರಿ ಮಾಡಿ ವಿದ್ಯುತ್ ಪೂರೈಕೆ ಮಾಡಬೇಕು. ಎಚ್.ಡಿ. ಕೋಟೆ, ಸರಗೂರು ನಂಜನಗೂಡು ಹಾಗೂ ತಿ.ನರಸೀಪುರ ತಾಲೂಕುಗಳಲ್ಲಿ ಹೆಚ್ಚು ಹಾನಿ ಆಗುವ ಸಾಧ್ಯತೆ ಇದೆ. ಹಾಗಾಗಿ ಅಲ್ಲಿ ಮಳೆಗಾಲದಲ್ಲಿ ಎದುರಾಗುವ ಪರಿಸ್ಥಿತಿ ಎದುರಿಸಲು ಸೆಸ್ಕ್ ಸಿಬ್ಬಂದಿಯನ್ನು ಸಜ್ಜುಗೊಳಿಸಬೇಕು ಎಂದರು.

ಭಾರಿ ಮಳೆಯಾದ ಸಂದರ್ಭ ಎಚ್.ಡಿ. ಕೋಟೆ ಹಾಗೂ ಸರಗೂರು ಭಾಗದಲ್ಲಿ ಕೆಲವು ಸೇತುವೆಗಳು ಮುಳುಗುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಜೆಸಿಬಿ ವ್ಯವಸ್ಥೆ ಮಾಡಿಕೊಳ್ಳಬೇಕು. ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳು ಬೀಳುವ ಹಂತದಲ್ಲಿ ಇದ್ದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಪೋಟೋ ದಾಖಲಾತಿ ಇಟ್ಟುಕೊಂಡು ತೆರವು ಗೊಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು, ಡೆಂೆ, ಚಿಕೂನ್‌ಗುನ್ಯಾ ಹರಡುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಅರಿವು ಮೂಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಧಿಕಾರಿ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಡಿಸಿಪಿ ಮುತ್ತುರಾಜ್, ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಹಾಗೂ ಇತರರು ಇದ್ದರು.