ಜಿಲ್ಲೆ

ಅಪಘಾತ ತಡೆಗೆ ಕ್ರಮ ಕೈಗೊಳ್ಳಿ

ತುಮಕೂರು ಡೆಸ್ಕ್

ವಿಜಯವಾಣಿ ಸುದ್ದಿಜಾಲ ತುಮಕೂರು
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಲೆಕೆಡಿಸಿಕೊಂಡಿದೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅಪಘಾತಗಳನ್ನು ತಡೆಯಲು ಕ್ರಮಕೈಗೊಳ್ಳಲು ಸೂಚಿಸಿದರು.


ರಾಜ್ಯದಲ್ಲಿ ಅಪಘಾತದಿಂದ ಸಾವು ಸಂಭವಿಸುತ್ತಿರುವ ಜಿಲ್ಲೆಗಳ ಪೈಕಿ 10ನೇ ಸ್ಥಾನದಲ್ಲಿದ್ದು, ಕಳೆದ ಮೇ ತಿಂಗಳಲ್ಲಿ 59, ಜೂನ್​ನಲ್ಲಿ 59 ಹಾಗೂ ಜುಲೈನಲ್ಲಿ 51 ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ದಿನೇದಿನೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಲೆಕೆಡಿಸಿಕೊಂಡು ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆ ನಡೆಸಲಾರಂಭಿಸಿದೆ.


ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆಅಪಘಾತಗಳು ಸಂಭವಿಸದಂತೆಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ರ್ನಿಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆಸೇರಿದ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳಲ್ಲಿ 41 ಅಪಘಾತ ಸ್ಥಳಗಳನ್ನು ಗುರುತಿಸಲಾಗಿದೆ. ಅಪಘಾತ ಸ್ಥಳಗಳಲ್ಲಿ ಎಚ್ಚರಿಕೆ- ಸೂಚನಾ ಫಲಕಗಳು, ಸ್ಪೀಡ್​ ಬ್ರೇಕರ್​, ಮಾರ್ಗ ಸೂಚಕಗಳನ್ನುಅಳವಡಿಸಿ ಅಪಘಾತ ಪ್ರಮಾಣ ತಗ್ಗಿಸುವಂತೆ ಅಧಿಕಾರಿಗಳಿಗೆನಿರ್ದೇಶನ ನೀಡಿದರು.


ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಮಾತನಾಡಿ, ಜಿಲ್ಲೆಯರಾಷ್ಟ್ರೀಯ ಹೆದ್ದಾರಿಗಳಲ್ಲಿಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸದ ಕಾರಣ ಹಾಗೂ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದರು. ರಾಜ್ಯದ ವಿವಿಧ ಜಿಲ್ಲೆಯ ಸಾರಿಗೆಗಳು ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಮಾರ್ಗವಾಗಿ ಹೋಗುವುದರಿಂದ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿಸರ್ವಿಸ್​ ರಸ್ತೆ ಮತ್ತು ಮಾರ್ಗಸೂಚಿ ಅಳವಡಿಸಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಸಂಭವಿಸಬಹುದಾದ ಸ್ಥಳಗಳು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರ ಕ್ಯಾತಸಂದ್ರ ವ್ಯಾಪ್ತಿ ಚಿಕ್ಕಹಳ್ಳಿ, ಹಿರೇಹಳ್ಳಿ, ಪಂಡಿತನಹಳ್ಳಿ ಗೇಟ್​, ಮಂಚಲಕುಪ್ಪೆ ವೃತ್ತ, ತುಮಕೂರು ಗ್ರಾಮಾಂತರ ವ್ಯಾಪ್ತಿ ಊರುಕೆರೆ ಜೈನ್​ ಪಬ್ಲಿಕ್​ ಸ್ಕೂಲ್​, ಕೋರಾ ವ್ಯಾಪ್ತಿ ಅಜ್ಜಗೊಂಡನಹಳ್ಳಿ ವೃತ್ತ, ನೆಲಹಾಳ್​ ವೃತ್ತ, ಕಳ್ಳಂಬೆಳ್ಳ ವ್ಯಾಪ್ತಿ ಜೋಗಿ ಹಳ್ಳಿ, ದೊಡ್ಡ ಆಲದ ಮರ, ಬಾಲೇನಹಳ್ಳಿ ಗೇಟ್​, ಶಿರಾ ವ್ಯಾಪ್ತಿ ಶಿವಾಜಿ ನಗರ, ಮಾನಂಗಿ ತಾಂಡಾ ಗೇಟ್​, ತಾವರೆಕೆರೆ ವ್ಯಾಪ್ತಿ ದ್ವಾರಾಳು ಬ್ರಿಡ್ಜ್​, ತಾವರೆಕೆರೆ. ರಾಷ್ಟ್ರೀಯ ಹೆದ್ದಾರಿ 73ರ ತುಮಕೂರು ಗ್ರಾಮಾಂತರ ವ್ಯಾಪ್ತಿ ಹೆಗ್ಗೆರೆ ಬಸ್​ ನಿಲ್ದಾಣ, ತಿಪಟೂರು ಪಟ್ಟಣ ವ್ಯಾಪ್ತಿ ಬಂಡಿಹಳ್ಳಿ ಗೇಟ್​- ರೇಣುಕಾ ಡಾಬ, ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್​ ವ್ಯಾಪ್ತಿ ಅಂಚೆಪಾಳ್ಯ ಸರ್ಕಲ್​, ಬೇಗೂರು ಸೇತುವೆ, ಹೇರೂರು ಸೇತುವೆ, ಉರ್ಕೇಹಳ್ಳಿ, ಅಮೃತೂರು ವ್ಯಾಪ್ತಿ ನಾಗೇಗೌಡನಪಾಳ್ಯ ಗೇಟ್​, ತಿಪ್ಪೂರು ಗೇಟ್​, ಮಾಗಡಿ ಪಾಳ್ಯ ಗೇಟ್​, ಹೇಮಾವತಿ ಕ್ರಾಸ್​, ಚಾಕೇನಹಳ್ಳಿ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 150(ಎ)ರ ತುರುವೇಕೆರೆ ವ್ಯಾಪ್ತಿ ಜೋಡಗಟ್ಟೆ; ರಾಜ್ಯ ಹೆದ್ದಾರಿ 33ರ ಹುಲಿಯೂರು ದುರ್ಗ ವ್ಯಾಪ್ತಿ ಬಿ.ಹೊಸಹಳ್ಳಿ-ಡಿ.ಹೊಸಹಳ್ಳಿ ಗೊಲ್ಲರಹಟ್ಟಿ, ಕೊಡವಂತಿ ಜಂಕ್ಷನ್​, ಹಳೆವೂರು ಜಂಕ್ಷನ್​, ಐಬಿ ಸರ್ಕಲ್​, ಕುಣಿಗಲ್​ ವ್ಯಾಪ್ತಿ ಕುರುಡಿಹಳ್ಳಿ, ಜಂಪೇನಹಳ್ಳಿ ಕ್ರಾಸ್​, ಜಟ್ಟಿ ಅಗ್ರಹಾರ, ಥರಟಿ; ರಾಜ್ಯ ಹೆದ್ದಾರಿ 3ರ ಮಧುಗಿರಿ ವ್ಯಾಪ್ತಿ ಕೆರೆಗಳ ಪಾಳ್ಯ ಬಸ್​ ನಿಲ್ದಾಣದ ಸುತ್ತ ಮುತ್ತ, ಮಿಡಿಗೇಶಿ ವ್ಯಾಪ್ತಿ ಹೊಸಕೆರೆ, ಪಾವಗಡ ವ್ಯಾಪ್ತಿ ರಾಜವಂತಿ ಕೆರೆ, ನಾಗಲಮಡಿಕೆ ಕ್ರಾಸ್​, ಪಳವಳ್ಳಿ ಕೆರೆ, ಕೊರಟಗೆರೆ ವ್ಯಾಪ್ತಿ ತುಂಬಾಡಿ, ಜಿ.ನಾಗೇನಹಳ್ಳಿ ಕೂಡ ಅಪಘಾತಕ್ಕೆ ಆಹ್ವಾನಿಸುತ್ತಿವೆ.

ಇಬ್ಬರ ಸಾವು ಮತ್ತಿಬ್ಬರು ಗಂಭೀರ: ತಿಪಟೂರು: ತಾಲೂಕಿನ ಜೈಪುರ ಗೇಟ್​ ಬಳಿ ಎರಡು ಬೈಕ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್​ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆೆ. ಹೊಳೇನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ನವೀನ್​ (28) ಮತ್ತು ತಿಪಟೂರು ತಾಲೂಕಿನ ಗಂಗನಟ್ಟದ ಶೇಷಾದ್ರಿ (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಕಡೆಗೆ ಹೊಗುತ್ತಿದ್ದ ನವೀನ್​ ಬೈಕ್​ ಅನ್ನು ತಕ್ಷಣ ತಿರುಗಿಸಿದ್ದರಿಂದ ಹಿಂದೆ ಬರುತ್ತಿದ್ದ ಶ್ರೀಧರ್​ ಬೈಕ್​ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಶೇಷಾದ್ರಿ ಅವರ ಹಿಂದೆ ಕುಳಿತಿದ್ದ ಸಚಿನ್​ ಮತ್ತು ನವೀನ್​ ಹಿಂದೆ ಕುಳಿತಿದ್ದ ಲೋಹಿತ್​ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನೊಣವಿನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.