ತಿ.ನರಸೀಪುರ ಪಟ್ಟಣದ ಅತಿಥಿ ಗೃಹದಲ್ಲಿ ರೈತ ಮುಖಂಡರು ಶುಕ್ರವಾರ ಸಭೆ ನಡೆಸಿದರು. ಕುರುಬೂರು ಸಿದ್ದೇಶ್, ಪ್ರಸಾದ್‌ನಾಯಕ್, ಕುರುಬೂರು ಪ್ರದೀಪ್, ಬಿ.ಪಿ.ಪರಶಿವಮೂರ್ತಿ, ಅಪ್ಪಣ್ಣ ಇತರರಿದ್ದರು. 
ಜಿಲ್ಲೆ

ಕಬಿನಿ ಬಲದಂಡೆ ನಾಲೆಗೆ ನೀರು ಹರಿಸಲು ಕ್ರಮಕೈಗೊಳ್ಳಿ

ತಿ.ನರಸೀಪುರ: ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಕಬಿನಿ ಜಲಾಶಯವು ಕಳೆದ ವರ್ಷಕ್ಕಿಂತಲೂ ಈ ವರ್ಷ ಬೇಗ ಭರ್ತಿಯಾಗಿರುವುದರಿಂದ ಕಬಿನಿ ಬಲದಂಡೆ ನಾಲೆಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕೆಂದು ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಶುಕ್ರವಾರ ರೈತ ಮುಖಂಡರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ವೈನಾಡಿನಲ್ಲಿ ಉತ್ತಮ ಮಳೆ ಆಗುತ್ತಿದ್ದು, ಈಗಾಗಲೇ ಕಬಿನಿ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟವನ್ನು ತಲುಪಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಬಿನಿ ಜಲಾಶಯ ಬಲದಂಡೆ ನಾಲೆಯ ಅಚ್ಚುಕಟ್ಟು ಭಾಗದ ರೈತರ ಜಮೀನುಗಳಿಗೆ ನೀರನ್ನು ಕೊಡದ ಸರ್ಕಾರ ರಾಜ್ಯದ ರೈತರನ್ನು ಕಡೆಗಣಿಸಿ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿತು ಎಂದು ಆರೋಪಿಸಿದರು.

ಇದುವರೆಗೂ ರಾಜ್ಯವನ್ನು ಆಳುವ ಸರ್ಕಾರಗಳು ರಾಜ್ಯದ ರೈತರಿಗೆ ತುಂಬಲಾರದ ನಷ್ಟವನ್ನುಂಟು ಮಾಡಿವೆ. ಆದ್ದರಿಂದ ರೈತರು ಬೆಳೆಯನ್ನು ಬೆಳೆಯದೇ ತುಂಬ ಸಂಕಷ್ಟದಲ್ಲಿದ್ದಾರೆ. ಕಬಿನಿ ಅಚ್ಚುಕಟ್ಟು ಭಾಗದ ರೈತರು ಎರಡು ವರ್ಷಗಳಿಂದ ನೀರಿಲ್ಲದೆ ಜೀವನ ಸಾಗಿಸುವುದು ತುಂಬ ದುಸ್ತರವಾಗಿದೆ. ಅಲ್ಲದೆ ಮೇವು ಇಲ್ಲದೆ ದನ-ಕರುಗಳ ಸಾಕಾಣಿಕೆಯಲ್ಲಿ ತುಂಬ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಬಿನಿ ಬಲದಂಡೆ ನಾಲೆಯಲ್ಲಿ ನೀರು ಹರಿಯದ ಕಾರಣ ಅಂತರ್ಜಲ ಕುಸಿದು ರೈತರ ಕೃಷಿ ಪಂಪ್‌ಸೆಟ್‌ಗಳಲ್ಲಿ ನೀರಿಲ್ಲದೆ ಅಲ್ಪಸ್ವಲ್ಪ ಬಾಳೆ, ಕಬ್ಬು, ತರಕಾರಿ ಒಣಗಿ ಹೋಗಿದ್ದು ರೈತರು ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದರು.

ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಮಾತನಾಡಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ರೈತರ ಜೀವನಾಡಿಯಾದ ಕಬಿನಿ ಜಲಾಶಯದ ಮೇಲೆ ಈ ಭಾಗದ ರೈತರು ಅವಲಂಬಿತರಾಗಿದ್ದಾರೆ. ಆದ್ದರಿಂದ ಈ ವರ್ಷ ಜಲಾಶಯವು ನೀರಿನ ಗರಿಷ್ಠ ಮಟ್ಟ ತಲುಪಿರುವುದರಿಂದ ತಕ್ಷಣವೇ ಕಬಿನಿ ಬಲದಂಡೆ ನಾಲೆಗೆ ನೀರು ಹರಿಸಬೇಕು. ಎರಡು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಕಾರ್ಯವನ್ನು ಪ್ರಾರಂಭ ಮಾಡುವ ಮೊದಲು ಕಳೆದ ವರ್ಷದ ಬಾಕಿ ಹಣ ಹಾಗೂ ಈ ವರ್ಷದ ಉಪ ಉತ್ಪನ್ನಗಳ ಲಾಭವನ್ನು ಹಂಚಿಕೆ ಮಾಡಬೇಕು ಎಂದು ಕಾರ್ಖಾನೆ ಮುಂಭಾಗ ಜುಲೈ 18ರಂದು ಜಾಗೃತಿ ಸಮಾವೇಶವನ್ನು ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಆದ್ದರಿಂದ ಈ ಸಮಾವೇಶಕ್ಕೆ ಕಬ್ಬು ಬೆಳೆಗಾರರು, ರೈತರು ಸ್ವಯಂಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕಿರಗಸೂರು ಪ್ರಸಾದ್‌ನಾಯಕ, ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಜಿಲ್ಲಾ ಜಂಟಿ ಕಾರ್ಯದರ್ಶಿ ಬಿ.ಪಿ.ಪರಶಿವಮೂರ್ತಿ, ಟೌನ್ ಅಧ್ಯಕ್ಷ ಅಪ್ಪಣ್ಣ, ಬನ್ನೂರು ಸೂರಿ, ಯಾಕನೂರು ರಾಜೇಶ್, ಕರೋಹಟ್ಟಿ ಉಮೇಶ್, ವಾಚ್ ಕುಮಾರ್, ತರಕಾರಿ ಲಿಂಗರಾಜು, ಯೋಗೀಶ, ಗೌರಿಶಂಕರ ಹಾಗೂ ಇನ್ನಿತರರು ಹಾಜರಿದ್ದರು.