ಶಿರಸಿ: ನಗರದಲ್ಲಿ ಹೆಚ್ಚುತ್ತಿರುವ ಬಿಡಾಡಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡಲು ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಶಿರಸಿ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ನಗರಸಭೆ ಸಭಾಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ನಗರದ 32 ವಾರ್ಡ್ಗಳಲ್ಲೂ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಶಾಲಾ ಮಕ್ಕಳು, ವೃದ್ಧರು ಒಂಟಿಯಾಗಿ ತಿರುಗಾಡದ ಪರಿಸ್ಥಿತಿಯಿದೆ.
ನಾಯಿಗಳನ್ನು ನಿಯಂತ್ರಿಸಲು ಸಾರ್ವಜನಿಕರು ನಗರಸಭೆಯ ಗಮನಕ್ಕೆ ತಂದರೂ ನಾಯಿಗಳನ್ನು ಕೊಲ್ಲಲು ಪ್ರಾಣಿ ದಯಾ ಸಂಘದವರಿಂದ ಅಡ್ಡಿ ಬರುತ್ತಿದೆ. ಇದಕ್ಕೆ ಜಿಲ್ಲಾಧಿಕಾರಿಯವರೇ ಮಾರ್ಗದರ್ಶನ ನೀಡಬೇಕು ಎಂದು ಗಣಪತಿ ನಾಯ್ಕ , ರಮಕಾಂತ ಭಟ್ ಹಾಗು ನಾಗರಾಜ ನಾಯ್ಕ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪ್ರಾಣಿದಯಾ ಸಂಘ ಹಾಗೂ ನಗರಸಭೆಯವರು ಸೇರಿ ಒಂದು ಸಮಿತಿ ರಚನೆ ಮಾಡಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಬೇಕು ಎಂದರು.
ಸದಸ್ಯ ನಾಗರಾಜ ನಾಯ್ಕ ಮಾತನಾಡಿ, ನಗರಸಭೆಯಿಂದ ಕೊಂಡವಾಡ ಕಟ್ಟಲಾಗಿದೆ. ಆದರೆ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರಿಸ್ಥಿಯಲ್ಲಿದೆ. ನಗರದಲ್ಲಿ ಬೇಕಾಬಿಟ್ಟಿ ತಿರುಗುವ ನೂರಾರು ದನಗಳಿವೆ.
ಅವುಗಳನ್ನು ಕೊಂಡವಾಡಕ್ಕೆ ಹಾಕಲು ನಮ್ಮಿಂದ ಆಗುತ್ತಿಲ್ಲ. ಗೋ ರಕ್ಷಕ ಪಡೆಯವರಿಗೆ ನಿರ್ವಹಣೆಯ ಜವಾಬ್ದಾರಿ ನೀಡಿದರೆ ಬಿಡಾಡಿ ದನಗಳನ್ನು ನಿಯಂತ್ರಿಸಬಹುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ದನಗಳನ್ನು ರಸ್ತೆಗೆ ಬಿಡುವವರಿಗೆ ದಂಡ ಹಾಕಿ ಕ್ರಮಕೈಗೊಳ್ಳಬೇಕು ಎಂದರು.
ಕೆರೆಗುಂಡಿ ರಸ್ತೆಯ ಇಕ್ಕಟ್ಟಾದ ಬಾಡಿಗೆ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಗರ ಆರೋಗ್ಯ ಪ್ರಾಥಮಿಕ ಕೇಂದ್ರಕ್ಕೆ ಸ್ವಂತ ಜಾಗ ನೀಡುವ ಉದ್ದೇಶದಿಂದ ಬನವಾಸಿ ರಸ್ತೆಯಲ್ಲಿರುವ ನಿರ್ಮಲ ನಗರದಲ್ಲಿ ಸರ್ವೆ ನಂಬರ 260ರಲ್ಲಿ ನಗರಸಭೆಯು ಜಾಗ ನೋಡಲಾಗಿದ್ದು ಈ ಜಾಗ ನೀಡಲು ಜಿಲ್ಲಾಧಿಕಾರಿಯಿಂದ ಪರವಾನಗಿ ಪಡೆಯಲಾಯಿತು.
ಈ ಜಾಗದ ಬಗ್ಗೆ ಕಂದಾಯ ಅಧಿಕಾರಿ ಆರ್. ಎಂ .ವೆರ್ಣೆಕರ ಮಾಹಿತಿ ನೀಡಿದರು. ನಗರಸಭೆ ವ್ಯಾಪ್ತಿಯ ಗಡಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿ ಪ್ರದೇಶವನ್ನು ನಗರಸಭೆಯ ವ್ಯಾಪ್ತಿಗೆ ಸೇರಿಸಲು ಸರ್ಕಾರದ ಅನುಮೋದನೆಗೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಯಡಳ್ಳಿ, ಹುತ್ಗಾರ, ದೊಡ್ನಳ್ಳಿ, ಇಸಳೂರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಪ್ರದೇಶಗಳನ್ನು ನಗರಕ್ಕೆ ಸೇರಿಸುವ ಕಾರ್ಯ ಶೀಘ್ರದಲ್ಲಿಯೇ ಆಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗರದಲ್ಲಿ 10, 800 ನಲ್ಲಿನೀರಿನ ಸಂಪರ್ಕವಿದೆ. ಕಳೆದ 10ವರ್ಷಗಳಿಂದ 1.90ಕೋಟಿ ರೂ. ನಲ್ಲಿ ನೀರಿನ ಕರ ಬಾಕಿ ಇದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದರು.
ಸದಸ್ಯ ಗಣಪತಿ ನಾಯ್ಕ ಮಾತನಾಡಿ ಕೆಲವರು ತಮಗೆ ನೀರು ಸರಿಯಾಗಿ ಬರುತ್ತಿಲ್ಲ ಅದ್ದರಿಂದ ನಾವು ಕರ ತುಂಬುವದಿಲ್ಲವೆಂದು ಹೇಳುತ್ತಿದ್ದಾರೆ ಎಂದರು.
ಜಿಲ್ಲಾಧಿಕಾರಿ ಮಾತನಾಡಿ, ನೀರು ಬಿಡಲು ವಾಲ್ವೆುನ್ ಸಮಸ್ಯೆಯಿದ್ದರೆ ನಾನು ಕೂಡಲೇ ಬಗೆ ಹರಿಸುತ್ತೇನೆ.ಪ್ರತಿ ವಾರ್ಡಿಗೆ ಒಬ್ಬ ವಾಲ್ವುನ್ ನೇಮಿಸಲು ಪ್ರಸ್ತಾವನೆ ಸಲ್ಲಿಸಿದರೆ ಕೂಡಲೇ ಅನುಮೋದನೆ ನೀಡುವದಾಗಿ ತಿಳಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ದೇವರಾಜ ಆರ್,ನಗರಸಭೆ ಪೌರಾಯುಕ್ತ ಕಾಂತರಾಜ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣನವರ್ ಉಪಸ್ಥಿತರಿದ್ದರು.