ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಉಂಟಾಗುವ ಪ್ರವಾಹದ ಪರಿಸ್ಥಿತಿಯನ್ನು ಎಲ್ಲ ಇಲಾಖೆಯ ಅಧಿಕಾರಿ ಸಿಬ್ಬಂದಿ ಪರಸ್ಪರ ಸಹಕಾರದೊಂದಿಗೆ ಯಾವುದೇ ಅನಾಹುತ ಹಾಗೂ ಸಮಸ್ಯೆಗಳು ಎದುರಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಕ್ಷೇತ್ರದ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ,ಸಿಬ್ಬಂದಿ ಹಾಗೂ ಟಾಸ್ಕ್ ಫೋರ್ಸ್ ಸಿಬ್ಬಂದಿಯೊಂದಿಗೆ ಅವರು ಚರ್ಚಿಸಿ ಮಾತನಾಡಿದರು.
ಪ್ರಸ್ತುತ ಉತ್ತಮ ಮಳೆಯಾಗಿರುವ ಕಾರಣ ಕೆ.ಆರ್.ಸಾಗರ ಅಣೆಕಟ್ಟೆ ಭರ್ತಿಯಾಗಿ ಜಲಾಶಯದಿಂದ ಕಾವೇರಿ ನದಿಗೆ ಹೆಚ್ಚುವರಿ ನೀರನ್ನು ಹರಿಸುತ್ತಿರುವ ಕಾರಣ ಎಲ್ಲ ಇಲಾಖೆ ಅಧಿಕಾರಿ ಸಿಬ್ಬಂದಿ ಶನಿವಾರ, ಭಾನುವಾರವೂ ಯಾರೂ ಕೆಲಸಕ್ಕೆ ಗೈರಾಗದೆ, ನಿರ್ಲಕ್ಷೃ ಎಸಗದೆ ಜಾಗೃತರಾಗಿದ್ದು, ನದಿ ಪಾತ್ರದ ಕೃಷಿ ಭೂಮಿಗಳಿಗೆ ರೈತಾಪಿ ಜನರು ಸೇರಿದಂತೆ ಜಾನುವಾರುಗಳ ಸಹಿತ ತೆರಳದಂತೆ ಎಚ್ಚರವಹಿಸಿ ಕೆಲಸ ಮಾಡಬೇಕು. ಈಗಾಗಲೇ ನದಿ ಪಾತ್ರದ ಗ್ರಾಮಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ತಾವು ಪರಿಶೀಲನೆ ನಡೆಸಿ ಖುದ್ದು ಜನರಿಂದ ಮಾಹಿತಿ ಪಡೆಯಲಾಗಿದೆ. ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ನಿತ್ಯ ಬೆಳಗ್ಗೆ ಕಾವೇರಿ ನೀರಾವರಿ ನಿಗಮದ ಸಂಪರ್ಕದಲ್ಲಿದ್ದು, ನದಿ ನೀರು ಹರಿವಿನ ಪ್ರಮಾಣದ ಪ್ರತಿಯೊಂದು ಮುಖ್ಯ ಮಾಹಿತಿ ಪಡೆಯುವ ಜತೆಗೆ ಈ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ನದಿ ಪಾತ್ರದ ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲೂ ಸಾರ್ವಜನಿಕರಿಗೆ ಮಾಧ್ಯಮಗಳು ಹಾಗೂ ಪ್ರಚಾರ ವಾಹನಗಳ ಮೂಲಕ ಮಾಹಿತಿ ಒದಗಿಸಿ ಮುಂಜಾಗ್ರತೆ ಕೈಗೊಳ್ಳಬೇಕು ಎಂದರು.
ಬಲಮುರಿ, ಕಾರೇಕುರ, ಬಂಗಾರದೊಡ್ಡಿ ಅಣೆಕಟ್ಟೆ, ಸ್ನಾನಘಟ್ಟ, ನಿಮಿಷಾಂಬ, ಗೋಸಾಯ್ ಘಾಟ್, ಸಂಗಮ, ಕರಿಘಟ್ಟ, ಕಾವೇರಿ ಬೋರೇದೇವರ ಗುಡಿ, ರಾಜಪರಮೇಶ್ವರಿ ಅಣೆ ಇಂತಹ ಪ್ರವಾಸಿ ತಾಣದ ಅಪಯಕಾರಿ ಸ್ಥಳಗಳಲ್ಲಿ ಈಜಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುವ ಪ್ರವಾಸಿಗರು ಮತ್ತು ವಿವಿಧ ಗ್ರಾಮಗಳ ನದಿ ಪಾತ್ರದ ಆಯಾ ವ್ಯಾಪ್ತಿಯ ತೀರದಲ್ಲಿ ಬಟ್ಟೆ ತೊಳೆಯಲು ತೆರಳುವ ಜನರನ್ನು ಪೊಲೀಸರು ಹಾಗೂ ಗೃಹ ರಕ್ಷಕದಳದ ಸಿಬ್ಬಂದಿ ನಿಯಂತ್ರಿಸುವ ಜತೆಗೆ ಜಾಗೃತಿ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.
ನದಿ ತೀರದ ಅಂಗಡಿ, ಅಧಿಕೃತ ಅಥವಾ ಅನಧೀಕೃತ ಹೋಟೆಲ್ ಹಾಗೂ ಹೋಂ ಸ್ಟೇ, ರೆಸಾರ್ಟ್‌ಗಳನ್ನು ತಕ್ಷಣವೇ ಮುಚ್ಚಿಸಿ ಇರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಿ ಎಚ್ಚರಿಕೆಯ ನೋಟಿಸ್ ಜಾರಿಗೊಳಿಸಬೇಕು. ಕಾವೇರಿ ನಿಗಮ, ಸೆಸ್ಕ್, ತಾಲೂಕು ಆಡಳಿತದಿಂದ ಕಂಟ್ರೋಲ್ ರೂಂ ತೆಗೆಯಲು ಅಗತ್ಯ ಸಿದ್ದತೆ ಕೈಗೊಳ್ಳಲಾಗಿದ್ದು, ಅಧಿಕಾರಿಗಳು ಇದರೊಂದಿಗೆ ಸಂಪರ್ಕದಲ್ಲಿರುವ ಜತೆಗೆ ಶಾಸಕರಿಗೆ ಮಾಹಿತಿ ಒದಗಿಸಿ ಎಂದರು.
ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಮಳೆ ಕಡಿಮೆಯಾದರೂ ಅಥವಾ ಹೆಚ್ಚು ಸುರಿದರೂ ಸಮಸ್ಯೆಗಳು ಮಾತ್ರ ಕಡ್ಡಾಯ. ಆದರೆ ಇಂತಹ ಸಮಯದಲ್ಲಿ ಅಧಿಕಾರಿಗಳು ಕರ್ತವ್ಯ ಪ್ರಜ್ಞೆ ಜತೆಗೆ ಮಾನವೀಯ ಮೌಲ್ಯಗಳೊಂದಿಗೆ ಒಗ್ಗಟ್ಟಿನಿಂದ ಪರಸ್ಪರ ಕಾರ್ಯ ನಿರ್ವಹಿಸುವುದು ಅವಶ್ಯ. ಸಾರ್ವಜನಿಕರಿಗೆ ಕುಡಿಯುವ ನೀರು, ವಿದ್ಯುತ್ ಪೂರೈಕೆ ಸೇರಿದಂತೆ ಮೂಲ ಸೌಕರ್ಯಗಳಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸುವ ಜತೆಗೆ ಜನರ ಆರೋಗ್ಯ ಕಾಪಾಡಲು ಸಹ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲ ದಂಡಿ ಮಾತನಾಡಿದರು.
ಪ್ರವಾಹದ ಸ್ಥಳಗಳಲ್ಲಿ ಜಿಲ್ಲಾಡಳಿತ ಪರಿಶೀಲನೆ: ತಾಲೂಕಿನ ಕಾವೇರಿ ನದಿ ತೀರದ ಅಪಯಕಾರಿ ಹಾಗೂ ಪ್ರವಾಹ ಉಂಟಾಗುವ ಸೂಕ್ಷ್ಮ ಪ್ರದೇಶಗಳಾದ ಭಂಭಂ ಮಠ, ಬಲಮುರಿ, ಎಡಮುರಿ, ಕಾರೇಕುರ, ಪಶ್ಚಿಮ ವಾಹಿನಿ, ದೊಡ್ಡೇಗೌಡನಕೊಪ್ಪಲು ಗ್ರಾಮ ಸಮೀಪದ ಗೌತಮ ಕ್ಷೇತ್ರ, ಓಂಕಾರೇಶ್ವರ ದೇಗುಲ ಸೇರಿದಂತೆ ಪಾಂಡವಪುರ ತಾಲೂಕಿನ ಎಣ್ಣೆಹೊಳೆ ಕೊಪ್ಪಲು ಗ್ರಾಮಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್ಪಿ ಮಲಿಕಾರ್ಜುನ ಬಾಲದಂಡಿ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಿಶೋರ್, ಚಂದ್ರಶೇಖರ್, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಡಿವೈಎಸ್ಪಿ ಎಚ್.ಎಸ್.ಮುರಳಿ, ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್ ಹಾಗೂ ಗ್ರಾಮಾಂತರ ಠಾಣೆಯ ಬಿ.ಜಿ.ಕುಮಾರ್ ಮತ್ತು ಕಂದಾಯ ಹಾಗೂ ಪಿಡಿಒ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
ಶ್ರೀರಂಗಪಟ್ಟಣದ ಸಂಗಮ, ಗೋಸಾಯ್ ಘಾಟ್, ಸ್ನಾನಘಟ್ಟ ಹಾಗೂ ಪಶ್ಚಿಮ ವಾಹಿನಿಯ ನದಿ ಪಾತ್ರದ ತೀರಗಳಲ್ಲಿ ನಡೆಯುವ ಧಾರ್ಮಿಕ, ಅಪರ ಕ್ರಿಯೆಗಳಿಗೆ ನದಿ ಪ್ರವಾಹ ತಗ್ಗುವವರೆಗೂ ಕೆಲಕಾಲ ನಿಯಂತ್ರಣ ಹೇರಲು ಅಧಿಕಾರಿಗಳಿಗೆ ಸೂಚಿಸಿದರು.
ಹಳೇ ಸೇತುವೆ ಸಂಚಾರ ಬಂದ್:
ಪಟ್ಟಣದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ 200 ವರ್ಷಗಳಿಗೂ ಪುರಾತನ ಲಾರ್ಡ್ ವೆಲ್ಲೆಸ್ಲಿ ಬ್ರಿಡ್ಜ್(ಹಳೇ ಸೇತುವೆ) ಮೇಲಿನ ವಾಹನಗಳ ಸಂಚಾರಕ್ಕೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿ ತಾತ್ಕಾಲಿಕವಾಗಿ ಸಂಚಾರ ಬಂದ್ ಮಾಡುವ ಜತೆಗೆ ಜನರ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ಜಿಲ್ಲಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.