ಸಿಂಧನೂರು: ನಗರದ ದೊಡ್ಡ ಕೆರೆಯ ಪಕ್ಕದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ತಾಲೂಕು ಕ್ರೀಡಾಂಗಣ ನಿರ್ವಹಣೆ ಇಲ್ಲದೆ ಹಾಳಾಗುತ್ತಿದ್ದು, ಇದನ್ನು ಉಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತದ ರಾಜ್ಯ ಘಟಕದ ಅಧ್ಯಕ್ಷ ವೆಂಕಟರಾವ ನಾಡಗೌಡ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ತಾವು ಶಾಸಕರಾದ ಸಮಯದಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಾಣ ಮಾಡಿ, ಮೇವು ಕತ್ತರಿಸುವ ಯಂತ್ರ, ರೂಲರ್ ಖರೀದಿಸಲಾಗಿದೆ. ಜೊತೆಗೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಜಿಮ್ ವ್ಯವಸ್ಥೆ ಮಾಡಲಾಗಿದೆ. ಮೈದಾನ, ಜಿಮ್ ನಿರ್ವಹಣೆಗಾಗಿ ತರಬೇತಿ ಹೊಂದಿದವರನ್ನು ನೇಮಿಸಲಾಗಿತ್ತು. ಕ್ರೀಡಾಂಗಣದಲ್ಲಿ ರನ್ನಿಂಗ್ ಟ್ರ್ಯಾಕ್, ವಾಲಿಬಾಲ್ ಗ್ರೌಂಡ್, ಕ್ರಿಕೆಟ್ ಪ್ರಾಕ್ಟೀಸ್ ಮಾಡುವುದಕ್ಕೆ ನೆಟ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆದರೀಗ ಕ್ರೀಡಾಂಗಣ ದಲ್ಲಿ ಕೆಲಸ ಮಾಡುವವರನ್ನು ತೆಗೆದು ಹಾಕಲಾಗಿದೆ. ನಿರ್ವಹಣೆ ಇಲ್ಲದೆ ಕ್ರೀಡಾಂಗಣ ಹಾಳಾಗಿ ಗ್ರೌಂಡ್‌ನಲ್ಲಿ ದನ, ಕುರಿಗಳು ಮೇಯುತ್ತಿವೆ. ಬೈಕ್, ಕಾರ್, ಟ್ರ್ಯಾಕ್ಟರ್ ವಾಹನಗಳು ತಿರುಗಾಡುತ್ತಿವೆ. ಈಗಾಗಲೇ ವಿಜಯವಾಣಿಯಲ್ಲಿ ತಾಲೂಕು ಕ್ರೀಡಾಂಗಣ ಹಾಳಾಗುತ್ತಿರುವ ಕುರಿತು ವಿಸ್ತತ ವರದಿ ಪ್ರಕಟವಾಗಿದೆ. ಜಿಲ್ಲಾಧಿಕಾರಿಗಳು ಕ್ರೀಡಾಂಗಣ, ಜಿಮ್ ನಿರ್ವಹಣೆಗಾಗಿ ಸಿಬ್ಬಂದಿ ನೇಮಕ ಮಾಡಬೇಕು.
ಸ್ಥಳೀಯ ಕ್ಲಬ್ ಸದಸ್ಯರನ್ನೊಳಗೊಂಡು ಸಮಿತಿ ರಚಿಸಬೇಕು. ಪ್ರತಿದಿನ ವಾಕಿಂಗ್ ಹಾಗೂ ಜಿಮ್‌ಗೆ ಬರುವ ಜನರಿಗೆ ತಿಂಗಳಿಗೆ ದರ ನಿಗದಿಪಡಿಸಬೇಕು. ಆ ಹಣದಿಂದ ಕ್ರೀಡಾಂಗಣ ಉಳಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.