ಜಿಲ್ಲೆ

ಜನತಾದರ್ಶನ ಸ್ವಿಕೃತ ಅರ್ಜಿಗಳ ವಿಲೇಗೆ ಕ್ರಮವಹಿಸಿ: ನಗರ ಜಿಲ್ಲಾಧಿಕಾರಿ ಕೆ.ಎ ದಯಾನಂದ

ಬೆಂಗಳೂರು: ಇತ್ತೀಚಿಗೆ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸ್ವೀಕೃತವಾಗಿರುವ ಮನವಿಗಳಿಗೆ ಶೀಘ್ರ ಕ್ರಮಕೈಗೊಳ್ಳುವ ಮೂಲಕ ಅರ್ಜಿಗಳ ವಿಲೇವಾರಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದರು.

ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜನತಾದರ್ಶನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾದ ಮನವಿಗಳ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳುವ ಕುರಿತು ಅವರು ಪರಿಶೀಲನೆ ನಡೆಸಿ ಮಾತನಾಡಿದರು.

ಆನೇಕಲ್ ತಾಲ್ಲೂಕಿನಲ್ಲಿ ಸೆ.25ರಂದು ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಜನತಾದರ್ಶನದಲ್ಲಿ ಒಟ್ಟು 332 ಮನವಿಗಳು ಸ್ವೀಕೃತವಾಗಿವೆ. ಇವುಗಳ ಬಗ್ಗೆ ಕ್ರಮಕೈಗೊಳ್ಳಲು ತಿಳಿಸಿದ್ದರೂ, ಈವರೆಗೆ ಶೇ.50 ಮಾತ್ರ ಪೂರ್ಣಗೊಂಡಿದ್ದು, ಉಳಿದವುಗಳ ಬಗ್ಗೆ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ಕಟ್ಟಪ್ಪಣೆ ಮಾಡಿದರು.

ಕಂದಾಯ ಇಲಾಖೆಗೆ 76 ಸ್ವೀಕೃತ ಮನವಿಗಳು ಬಂದಿದ್ದು, 47 ಮನವಿಗಳಿಗೆ ಕ್ರಮವಹಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಕ್ರಮವಾಗಿ 36 ಮತ್ತು 16 ಮನವಿಗಳು ಸ್ವೀಕೃತವಾಗಿದ್ದರೂ, ಯಾವುದೇ ಅರ್ಜಿ ವಿಲೇವಾರಿ ಆಗಿಲ್ಲ. ಆರೋಗ್ಯ ಕುಟುಂಬ ಕಲ್ಯಾಣ, ಇಂಧನ, ಶಿಕ್ಷಣ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್, ಸಾರಿಗೆ ಇಲಾಖೆ ಹಾಗೂ ಹಲವು ಇಲಾಖೆಗಳು ಶೂನ್ಯ ಸಾಧನೆ ಮಾಡಿವೆ. ಮುಂದಿನ ದಿನಗಳಲ್ಲಿ ಇಂತಹ ಅಸಡ್ಡೆ ಸಹಿಸಲು ಸಾಧ್ಯವಿಲ್ಲ. ಎಲ್ಲ ವಿಭಾಗಗಳ ಅಧಿಕಾರಿಗಳು ವಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಪ್ರಥಮ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದರು.

ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕೆ. ಕೃಷ್ಣಮೂರ್ತಿ, ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಪಿ.ಎಸ್.ಕಾಂತರಾಜ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.