ಜಿಲ್ಲೆ

ತುರ್ತು ಪರಿಹಾರಕ್ಕೆ ಕ್ರಮ ವಹಿಸಿ : ಅಧಿಕಾರಿಗಳ ಕಾರ್ಯ ವೈಖರಿಯಿಂದ ಅಸಮಾಧಾನ

ಬಾಗಲಕೋಟೆ : ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದ ಮನೆ, ಬೆಳೆ, ರಸ್ತೆ ಸೇರಿದಂತೆ ಇತರೆ ಹಾನಿ ಬಗ್ಗೆ ತುರ್ತಾಗಿ ಸಮೀಕ್ಷೆ ಕೈಗೊಂಡು ಪರಿಹಾರ ಒದಗಿಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಅಽಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ಅತಿವೃಷ್ಟಿಯಿಂದ ಉಂಟಾದ ಹಾನಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿ ಸಂಭವಿಸುತ್ತಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚಾಗಿ ಮಳೆ ಸುರಿದು ಸಮಸ್ಯೆಯಾಗಿದೆ. ಇನ್ನು ನಾಲ್ಕೈದು ದಿನ ಮಳೆ ಆಗುವ ಸಂಭವವಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಹಾನಿ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಅತಿವೃಷ್ಟಿಯಿಂದಾಗಿ ಉಂಟಾದ ಹಾನಿ ಬಗ್ಗೆ ತಹಸೀಲ್ದಾರರಲ್ಲಿ ಮಾಹಿತಿ ಇಲ್ಲದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಆಯಾ ತಾಲೂಕು ವ್ಯಾಪ್ತಿಯಲ್ಲಿ ಬೆಳೆ, ಮನೆ, ರಸ್ತೆ, ವಿದ್ಯುತ್‌ಗೆ ಸಂಬಂಧಿಸಿದ ಹಾನಿಯ ಮಾಹಿತಿ ಪಡೆದು ವಿವಿಧ ಇಲಾಖೆಗಳ ಸಹಕಾರದೊಂದಿಗೆ ತುರ್ತಾಗಿ ಸಮೀಕ್ಷೆ ನಡೆಸುವುದರ ಜೊತೆಗೆ ಪರಿಹಾರ ಒದಗಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಉಪವಿಭಾಗಾಧಿಕಾರಿಗಳು ಈ ಬಗ್ಗೆ ಪರಿಶೀಲಿಸುವ ಕೆಲಸವಾಗಬೇಕು. ಅನುಮತಿ ಪಡೆಯದೇ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲವೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿವಿಧ ಜಲಾಶಯಗಳ ಹೊರ ಹರಿವಿನ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪಡೆದುಕೊಂಡರು. ಆಲಮಟ್ಟಿ ಜಲಾಶಯದ ಹೊರ ಹರಿವು 25000 ಕ್ಯೂಸೆಕ್ ಇದ್ದರೆ, ಹಿಪ್ಪರಗಿ 26 ಸಾವಿರ ಕ್ಯೂಸೆಕ್, ಹಿಡಕಲ್ 3810 ಕ್ಯೂಸೆಕ್, ನವೀಲುತೀರ್ಥ 894 ಕ್ಯೂಸೆಕ್ ಇದ್ದು, ಜಿಲ್ಲೆಯಲ್ಲಿರುವ ಕೃಷ್ಣಾ ನದಿಯಿಂದ 56, ಘಟಪ್ರಭಾ ನದಿಯಿಂದ 69 ಹಾಗೂ ಮಲಪ್ರಭಾ ನದಿಯಿಂದ 63 ಸೇರಿ ಒಟ್ಟು 188 ಗ್ರಾಮಗಳು ಹಾನಿಗೊಳಗಾಗಿರುವುದಾಗಿ ಸಭೆಗೆ ತಿಳಿಸಲಾಯಿತು.

ಮುಂಗಾರು ಅವಧಿಯಲ್ಲಿ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಒಂದು ಪರಿಹಾರ ಕೇಂದ್ರ ಸ್ಥಾಪಿಸಲಾಗಿದ್ದು, 14 ಕುಟುಂಬಗಳ 60 ಜನ ಆಶ್ರಯ ಪಡೆದಿದ್ದರು. ಓರ್ವ ವ್ಯಕ್ತಿ ಮೃತಪಟ್ಟಿದ್ದು, 5 ಲಕ್ಷ ಪರಿಹಾರ ನೀಡಲಾಗಿದೆ. ಒಟ್ಟು 67 ವಿವಿಧ ತರಹದ ಜಾನುವಾರುಗಳು ಹಾನಿಗೀಡಾಗಿದ್ದು, 3.49 ಲಕ್ಷ ರೂಗಳ ಪರಿಹಾರ ವಿತರಿಸಲಾಗಿದೆ. ಕೃಷಿ 24389 ಹೆಕ್ಟೇರ್, ತೋಟಗಾರಿಕೆ 33 ಹೆಕ್ಟೇರ್ ಸೇರಿ ಒಟ್ಟು 24422 ಹೆಕ್ಟೇರ್ ಪ್ರದೇಶ ಹಾನಿಗೀಡಾಗಿದ್ದು, ಪರಿಹರ‍್ಕಕಾಗಿ ಕ್ರಮವಹಿಸುವಂತೆ ಕಳಸದ ತಿಳಿಸಿದರು.

ಶಾಲಾ ಕಟ್ಟಡಗಳು 32, ಕೋಣೆಗಳು 89 ಹಾನಿಗೊಳಗಾಗಿದ್ದು, ಅಂದಾಜು 219 ಲಕ್ಷ ರೂ.ಗಳ ಹಾನಿ ಉಂಟಾಗಿದೆ. ಅಂಗನವಾಡಿಗಳು 60 ಕಟ್ಟಡ ಹಾನಿಯಾಗಿದ್ದು, ಅಂದಾಜು 170 ಲಕ್ಷ ಇದ್ದು, ಎನ್‌ಡಿಆರ್‌ಎಫ್ ನಾರ್ಮ್ಸ ಪ್ರಕಾರ 120 ಲಕ್ಷ ಬರಲಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ, ಸೇತುವೆ ಹಾಗೂ ಇತರೆ ಸರ್ಕಾರಿ ಕಟ್ಟಡಗಳು ಸೇರಿ 4704 ಲಕ್ಷ ರೂ.ಗಳ ಹಾನಿಯಾಗಿರುವುದಾಗಿ ಸಭೆಗೆ ಕಳಸದ ತಿಳಿಸಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ. ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಪ್ರಭು ಮಾನೆ, ಉಪ ವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.