ಕನಕಗಿರಿ: ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಲು ಹಣ ಪಡೆಯುವುದು ಸಲ್ಲ ಎಂದು ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಪ್ಪ ಈಟಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧಿಕಾರಿಗಳು ಸರ್ಕಾರದ ಯೋಜನೆಯ ಅನುದಾನ ದುರ್ಬಳಕೆ ಮಾಡಿಕೊಳ್ಳಬಾರದು. ಅರ್ಜಿದಾರರ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನೌಕರರು ಸಾರ್ವಜನಿಕರ ಕೆಲಸ ಮಾಡುವುದಕ್ಕೆ ನಾನಾ ನೆಪವೊಡ್ಡಿ, ಅಲೆದಾಡಿಸಿ ಹಣ ಪಡೆದು ಆದಾಯಕ್ಕೂ ಮೀರಿ ಆಸ್ತಿ ಮಾಡುವುದು ಕಾನೂನು ಬಾಹಿರವಾಗಿದೆ. ಅಧಿಕಾರಿಗಳು ಪಾರದರ್ಶಕ ಆಡಳಿತ ನಡೆಸಿ, ಸಾರ್ವಜನಿಕರ ಕುಂದು ಕೊರತೆ ನಿಗಿಸಬೇಕು. ನಿಯಮಗಳನ್ನು ಮೀರಿ ಕೆಲಸ ಮಾಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು.
2019ರಲ್ಲಿ ಆಶ್ರಯ ಮನೆಗಾಗಿ ಅರ್ಜಿ ಸಲ್ಲಿಸಿದ್ದು ಈವರೆಗೂ ಪಪಂ ಸ್ಪಂದಿಸಿಲ್ಲ ಎಂದು 10ನೇ ವಾರ್ಡ್ ನಿವಾಸಿ ಹಜರತ್‌ಬೀ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಪಂ ಆಶ್ರಯ ಯೋಜನೆ ನೌಕರ ಪುರುಷೋತ್ತಮ ಪತ್ತಾರ, ಆಶ್ರಯ ಮನೆ ಮಂಜೂರಾತಿಯಾಗಿದೆ. ಅರ್ಜಿದಾರರ ನಿವೇಶನ ಸಮಸ್ಯೆ ಇದೆ ಎಂದು ದಾಖಲೆಗಳನ್ನು ಲೋಕಾಯುಕ್ತರಿಗೆ ಸಲ್ಲಿಸಿ ಸಮಸ್ಯೆಗೆ ತೆರೆ ಎಳೆದರು.
ಈ ಮೊದಲು ಎಪಿಎಂಸಿ ಸುತ್ತಲೂ ಕಾಂಪೌಂಡ್ ಇತ್ತು. ಆದರೆ, ಇದೀಗ ಆದು ಇಲ್ಲವಾಗಿದೆ. ನಮ್ಮದೇ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡು ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಬಗ್ಗೆ ಎಪಿಎಂಸಿಗೆ ದೂರು ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಕ್ರಮಕ್ಕೆ ಮುಂದಾಗಿಲ್ಲ. ಸದರಿ ಭೂಮಿ ನಮ್ಮ ಕುಟುಂಬಕ್ಕೆ ಸೇರಿದ್ದಾಗಿದ್ದು, ಸಮಸ್ಯೆ ಸರಿಪಡಿಸುವ ಮೂಲಕ ನ್ಯಾಯ ಕೊಡಿಸಲು ಮುಂದಾಗಬೇಕು ಎಂದು ವೈದ್ಯ ರಂಗಾರೆಡ್ಡಿ ಆಗ್ರಹಿಸಿದರು.
ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಪಂನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಹುದ್ದೆಗೆ ಪುವರ್ನಸತಿ ಕಾರ್ಯಕರ್ತನಾಗಿ ತನ್ನನ್ನು ನೇಮಿಸಿಕೊಳ್ಳುವಂತೆ ಜಬ್ಬಲಗುಡ್ಡದ ವಿಕಲಚೇತನ ಯಮನೂರಪ್ಪ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಸಹಾಯಕ ನಿರ್ದೇಶಕಿ ಶೆರಪೋನ್ನಿಸಾ, ಬಿಇಒ ನಟೇಶ, ಸಿಡಿಪಿಒ ವಿರೂಪಾಕ್ಷಿ, ಇಸಿಒ ಆಂಜನೇಯ ಇತರರಿದ್ದರು.
ದ್ರಾವಣ ಸಿಂಪಡಿಸಲು ಸೂಚನೆ
ಲೋಕಾಯುಕ್ತರ ಅಹವಾಲು ಸಭೆಯಲ್ಲಿ ಫೆ.18ರಂದು ವಿಜಯವಾಣಿಯಲ್ಲಿ ಪ್ರಕಟವಾದ ಸೊಳ್ಳೆಗಳ ಕಾಟಾಪುರದಲ್ಲಿ ಜನರು ತತ್ತರ ವರದಿ ಪ್ರತಿಧ್ವನಿಸಿತು. ಕೆ.ಕಾಟಾಪುರ ಗ್ರಾಮಸ್ಥರು ಪತ್ರಿಕೆಯನ್ನಿಡಿದು ಸಭೆಗೆ ಆಗಮಿಸಿ ಗ್ರಾಮದಲ್ಲಿ ಸೊಳ್ಳೆಗಳ ಕಾಟದಿಂದ ತತ್ತರಿಸಿದ್ದೇವೆ. ಆರೋಗ್ಯದ ದೃಷ್ಟಿಯಿಂದ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ಆಗ ಸೊಳ್ಳೆ ನಿಯಂತ್ರಣಕ್ಕೆ ದ್ರಾವಣ ಸಿಂಪಡಿಸಲು ಪಿಡಿಒ ಮಲ್ಲಿಕಾರ್ಜುನರಿಗೆ ಲೋಕಾಯುಕ್ತರು ಸೂಚಿಸಿದರು.