ಚಿಕ್ಕಮಗಳೂರಿನಲ್ಲಿ ಡಿಎಸ್‌ಎಸ್ ಮುಖಂಡರು ಎಡಿಸಿ ನಾರಾಯಣ ಕನಕ ರಡ್ಡಿಗೆ ಮನವಿ ಸಲ್ಲಿಸಿದರು. ಡಿ.ರಾಮು, ಈಶಣ್ಣ, ಹನುಮಂತ, ಎನ್.ಶ್ರೀಕಾಂತ್, ಚೈತ್ರಾ ಇತರರಿದ್ದರು. 
ಜಿಲ್ಲೆ

ಕಲುಷಿತ ನೀರು ಪೂರೈಸಿದವರ ವಿರುದ್ಧ ಕ್ರಮ ಕೈಗೊಳ್ಳಿ

ಚಿಕ್ಕಮಗಳೂರು: ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸರಬರಾಜಿಗೆ ಕಾರಣರಾದವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಅಪರ ಜಿಲ್ಲಾಧಿಕಾರಿ ನಾರಾಯಣ ಕನಕ ರಡ್ಡಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಕವಾಡಿಗರಹಟ್ಟಿ ಕಾಲನಿಯ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸಿಲ್ಲ. ಇತ್ತೀಚೆಗೆ ಗ್ರಾಮದಲ್ಲಿ ಅಂತರ್ಜಾತಿಯ ವಿವಾಹ ಆಗಿರುವುದರಿಂದ ಇಂತಹ ಕೃತ್ಯ ನಡೆಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಪ್ರೊ. ಬಿ.ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್ ಮನವಿ ಮಾಡಿದರು.
ಪ್ರಕರಣದಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ಒದಗಿಸಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸಂಪೂರ್ಣ ಉಚಿತವಾಗಿ ನೀಡಬೇಕು. ಎಲ್ಲ ವಾಟರ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಈ ಪ್ರಕರಣಕ್ಕೆ ಕಾರಣವಾಗಿರುವ ಸಿಬ್ಬಂದಿ, ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಕೋರಿದರು.
ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ಚಿಕ್ಕಕುರುಬರಹಳ್ಳಿ ಈಶಣ್ಣ, ಶೃಂಗೇರಿ ತಾಲೂಕು ಅಧ್ಯಕ್ಷ ಹನುಮಂತ, ಸಂಘಟನಾ ಕಾರ್ಯದರ್ಶಿ ಪಿ.ಎ.ಜಾರ್ಜ್, ಎನ್.ಶ್ರೀಕಾಂತ್, ಮುಖಂಡರಾದ ಮೈಲಾರಿ, ಚೈತ್ರಾ ಇತರರಿದ್ದರು.