ಕುಮಟಾ: ಇತ್ತೀಚಿನ ವರ್ಷಗಳಲ್ಲಿ ಪುರುಷರ ಮೇಲೆ ಮಹಿಳೆಯರಿಂದ ಸುಳ್ಳು ಪ್ರಕರಣಗಳು ದಾಖಲಾಗಿ ದೌರ್ಜನ್ಯ ಅನುಭವಿಸುವ ಘಟನೆಗಳು ಹೆಚ್ಚಾಗಿವೆ. ಇಂತಹ ಸುಳ್ಳು ದೂರುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜನಸಾಮಾನ್ಯರ ಕಲ್ಯಾಣ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯ ಅಂಗವಾಗಿ ಪೊಲೀಸ್ ಇಲಾಖೆಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ದೇಶದ ಕಾನೂನಿನ ದುರುಪಯೋಗದಿಂದ ಮಹಿಳೆಯರಿಂದ ಪುರುಷರ ಮೇಲೆ ಸುಳ್ಳು ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಇದು ಸರ್ಕಾರಿ ಹಾಗೂ ಖಾಸಗಿ ಸೇವೆಯಲ್ಲಿರುವವರನ್ನೂ ಬಿಟ್ಟಿಲ್ಲ. ಇದರಿಂದಾಗಿ ಪುರುಷರು ಅನವಶ್ಯಕ ನ್ಯಾಯದ ಕಟಕಟೆಯಲ್ಲಿ ನಿಲ್ಲುವಂತಾಗಿದೆ. ಎಷ್ಟೋ ಬಾರಿ ಕೋರ್ಟಿನಿಂದ ನ್ಯಾಯ ನಿರ್ಣಯ ಬರುವವರೆಗೆ ವರ್ಷಗಟ್ಟಲೆ ಜೈಲು ಕೂಡಾ ಅನುಭವಿಸಬೇಕಾಗುತ್ತದೆ. ಇದರಿಂದ ಪುರುಷರು ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಿದ್ದಾರೆ.
ವಿಚಿತ್ರವೆಂದರೆ ಮಹಿಳೆಯರು ಪೊಲೀಸ್ ದೂರು ನೀಡಿದರೆ ಅದನ್ನು ಪರಿಶೀಲಿಸದೆ ಎಫ್ಐಆರ್ ದಾಖಲಾಗುತ್ತದೆ. ಹೀಗಾಗಿ ಮಹಿಳೆಯರಿಂದ ಪುರುಷರ ವಿರುದ್ಧ ದೂರು ಸ್ವೀಕರಿಸುವಾಗ ಕೂಲಂಕಷವಾಗಿ ಪರಿಶೀಲಿಸಿಯೇ ಪ್ರಕರಣ ದಾಖಲಿಸಬೇಕು. ದೂರಿನಲ್ಲಿ ಸುಳ್ಳು ಕಂಡುಬಂದಲ್ಲಿ ದೂರು ನೀಡಿದವರ ವಿರುದ್ಧವೇ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಮನವಿಯನ್ನು ಸಿಪಿಐ ಯೋಗೀಶ ಅವರಿಗೆ ಜನಸಾಮಾನ್ಯರ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಮತ್ತು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಇನ್ನಿತರರು ಸಲ್ಲಿಸಿದ್ದಾರೆ.