ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್‌ಗಳನ್ನು ನಿಂದಿಸಿ ಅಪಮಾನಿಸಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಿಎಸ್‌ಐ ಸಂತೋಷ್ ಶೆಟ್ಟಿಗೆ ಮನವಿ ಸಲ್ಲಿಸಿದರು. ನವಾಜ್, ಯಾಸೀನ್, ಇಮ್ರಾನ್ ಖಾನ್, ವಾಸು ಇತರರಿದ್ದರು. 
ಜಿಲ್ಲೆ

ಮೆಕ್ಯಾನಿಕ್‌ಗಳನ್ನು ಅವಮಾನಿಸದವರ ವಿರುದ್ಧ ಕ್ರಮಕೈಗೊಳ್ಳಿ

ತರೀಕೆರೆ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್ ವೃತ್ತಿ ಮಾಡುತ್ತಿರುವ ಶ್ರಮಿಕ ವರ್ಗವನ್ನು ಕೀಳಾಗಿ ನಿಂದಿಸಿ ಅಪಮಾನಿಸಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ದ್ವಿಚಕ್ರ ವಾಹನ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶನಿವಾರ ಪಿಎಸ್‌ಐ ಸಂತೋಷ್ ಶೆಟ್ಟಿಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ನವಾಜ್ ಮಾತನಾಡಿ, ಖಾಸಗಿ ವಾಹಿನಿ ಪ್ರಚಾರ ಮಾಡುತ್ತಿರುವ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್ ವೃತ್ತಿಯಲ್ಲಿ ತೊಡಗಿಕೊಂಡಿರುವ ಶ್ರಮಿಕ ವರ್ಗವನ್ನು ಕೊಚ್ಚೆಗಳೆಂದು ನಿಂದಿಸಲಾಗಿದೆ ಎಂದು ದೂರಿದರು.
ಈ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್ ವೃತ್ತಿ ಮೂಲಕ ಜೀವನ ನಿರ್ವಹಣೆ ಮಾಡುತ್ತಿರುವ ಶ್ರಮಿಕ ವರ್ಗವನ್ನು ಅವಮಾನಿಸಿ ನಿಂದಿಸಿರುವುದು ಖಂಡನೀಯ. ನಮ್ಮ ವೃತ್ತಿಗೆ ಅಗೌರವ ತೋರಿದ ವಾಹಿನಿ ಜತೆ ಶೋನಲ್ಲಿ ಭಾಗವಹಿಸಿದ್ದ ನಟ, ನಟಿಯರು ಹಾಗೂ ನಿರೂಪಕರ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಮೂಲಕ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಯಾಸೀನ್, ಗೌರವಾಧ್ಯಕ್ಷ ನಜೀರ್, ಕಾರ್ಯದರ್ಶಿ ಇಮ್ರಾನ್ ಖಾನ್, ಸಂಘಟನಾ ಕಾರ್ಯದರ್ಶಿ ವಾಸು, ಸದಸ್ಯರಾದ ರಾಮು, ಮಿಥುನ, ನಾಸೀರ್ ನಾಜೀಮ್ ಮತ್ತಿತರರಿದ್ದರು.