ಎನ್.ಆರ್.ಪುರ: ತಾಲೂಕಿನ ಬೈರಾಪುರ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ಭದ್ರಾವತಿ ಅರಣ್ಯ ವಿಭಾಗದ ಎಸಿಎ್, ಡಿಸಿಎ್ ಹಾಗೂ ಉಂಬಳೆಬೈಲು ವಲಯ ಅರಣ್ಯಾಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಂ.ಶಿವಣ್ಣ ಮಾತನಾಡಿ, ಯಾವ ಸರ್ಕಾರ ಬಂದರೂ ದಲಿತರ ಮೇಲೆ ದೌರ್ಜನ್ಯ ನಿಂತಿಲ್ಲ. ಅಧಿಕಾರಿಗಳು ಧರ್ಮಾಧಾರಿತ ಮನಸ್ಥಿತಿಯಲ್ಲಿದ್ದಾರೆ. ಭದ್ರಾವತಿ ವಿಭಾಗದ ಡಿಸಿಎ್, ಎಸಿ.ಎ್ ಸೂಚನೆ ಮೇರೆಗೆ ಉಂಬಳೆಬೈಲು ವಲಯ ಅರಣ್ಯಾಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಅಕ್ಟೋಬರ್ 28 ರಂದು ಅರಣ್ಯಾಧಿಕಾರಿಗಳು ನಮ್ಮ ಜಮೀನಿನ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
2017ರಲ್ಲಿ ಈ ಕುಟುಂಬದವರಿಗೆ ಸರ್ಕಾರದಿಂದ ಸರ್ವೇ ನಂ 44 ರಲ್ಲಿ ಎರಡು ಎಕರೆ 25 ಗುಂಟೆ ಜಮೀನು ಮಂಜೂರಾಗಿದೆ. ಆದರೆ, ಅರಣ್ಯ ಇಲಾಖೆ ಆ ಭೂಮಿಯನ್ನು ಕಿರುಅರಣ್ಯ ಎಂದು ಭೂ ಕಬಳಿಕೆ ನ್ಯಾಯಾಲಯದಲ್ಲಿ ದಾಖಲಿಸಿದ್ದ ದಾವೆ ವಜಾ ಆಗಿದೆ. ಆದರೂ, ಅರಣ್ಯ ಇಲಾಖೆ ತಮ್ಮ ಭೂಮಿ ಎಂದು ದೌರ್ಜನ್ಯ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ. ಈ ಕುರಿತು ಗೃಹ ಸಚಿವರು,ಅರಣ್ಯ ಸಚಿವರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಡಿಎಸ್‌ಎಸ್ ಮುಖಂಡರಾದ ಓಂಪ್ರಕಾಶ್, ಶೆಟ್ಟಿಕೊಪ್ಪ ಮಹೇಶ್, ವಕೀಲ ಜಿ.ಆರ್.ಷಡಕ್ಷರಪ್ಪ, ಹಾಸನದ ರಂಗಸ್ವಾಮಿ, ಬೆಂಗಳೂರಿನ ಪುರುಷೋತ್ತಮ, ಬಾಳೆಹೊನ್ನೂರಿನ ಕೆ.ಕೆ.ಬಾಬಣ್ಣ, ಶಿವಮೊಗ್ಗದ ಕಾರ್ಮಿಕ ಮುಖಂಡ ಸತೀಶ, ಬೈರಾಪುರ ಬಾಬು, ಮಂಜುಳಾ, ಚಿತ್ರಪ್ಪಯರ ಬಾಳ್ ಮತ್ತಿತರರು ಇದ್ದರು.