ಹುನಗುಂದ: ಜಿಲ್ಲೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಹೆಸರಿನಲ್ಲಿ ಖೊಟ್ಟಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡವರು ಮತ್ತು ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ವಾಲ್ಮೀಕಿ ಸಮುದಾಯದ ಮುಖಂಡರು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆ ಬಹಿಷ್ಕರಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಚಂದ್ರಪ್ಪ ತಳವಾರ ಮಾತನಾಡಿ, ಧರಣಿ ಸತ್ಯಾಗ್ರಹ ನಡೆಸಿದ ಜಿಲ್ಲೆಯ ಸಮಾಜದ ಮುಖಂಡರಿಗೆ ಜಿಲ್ಲಾಧಿಕಾರಿಗಳು ಲಿಖಿತ ಉತ್ತರ ಕೊಟ್ಟು 15 ದಿನಗಳಲ್ಲಿ ಪ್ರಮಾಣಪತ್ರ ನೀಡಿ ಸಹಕರಿಸಿದ ಅಧಿಕಾರಿಗಳ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಈವರೆಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಭೆ ಬಹಿಷ್ಕರಿಸಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಬೇರೆ ಸಮುದಾಯದವರಿಗೆ ಖೊಟ್ಟಿ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆಗೆ ಆದೇಶ ನೀಡಿ ಶಾಲಾ ಹಂತದಲ್ಲಿ ಈ ಕೆಳಕಂಡ ಬೇರೆ ಸಮುದಾಯಗಳಾದ ಕಾಡುಕುರುಬ, ರಾವಳ, ಕಬ್ಬಲಿಗ, ಅಂಬಿಗ, ಟೋಕರಿ ಕೋಳಿ, ಬೆಸ್ತ ಈ ಸಮುದಾಯಗಳಿಗೆ ಎಸ್‌ಟಿ ಪರ್ಯಾಯ ಪದಗಳಾದ ಪರಿವಾರ/ತಳವಾರ ಅಂತಾ ದಾಖಲು ಮಾಡಬಾರದೆಂದು ಮನವಿ ಮಾಡಿಕೊಂಡರು.
ಸಮಾಜದ ಮುಖಂಡರಾದ ಸೋಮಶೇಖರ ಬಲಕುಂದಿ, ಶಿವಪುತ್ರಪ್ಪ ವಾಲಿಕಾರ, ಸಿದ್ದಪ್ಪ ಜಾಲಿಗಿಡದ, ವಿ.ಜಿ. ಗುಡದನ್ನವರ, ಮಹಾಂತೇಶ ತಳವಾರ, ಹನುಮಂತ ಸುಣಕಲ್ಲ ಇತರರಿದ್ದರು.