ಅರಸೀಕೆರೆ ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯನ್ನು ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಎಂ.ಜಿ.ಸಂತೋಷ್ ಕುಮಾರ್, ಧರ್ಮಶೇಖರ್, ಸತೀಶ್, ಸಮೀವುಲ್ಲಾ , ಮಂಜುಳಾ ಬಾಯಿ ಇತರರು ಇದ್ದರು.  
ಜಿಲ್ಲೆ

ಪಿಡಿಒ ವಿರುದ್ಧ ಕ್ರಮ ಜರುಗಿಸಿ

ಮಾದೇಶ್ ತಿ.ನರಸೀಪುರ

ಅರಸೀಕೆರೆ: ಸರ್ಕಾರಿ ದಾಖಲೆ ಹೊತ್ತೊಯ್ದಿರುವ ಅಗ್ಗುಂದ ಗ್ರಾಮ ಪಂಚಾಯಿತಿ ಮಹಿಳಾ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಒತ್ತಾಯಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಪಂಚಾಯಿತಿ ವ್ಯವಹಾರಗಳಿಗೆ ಸಂಬಂಧಿಸಿದ ಚೆಕ್ ಪುಸ್ತಕ, ಗಾಡ್ರೇಜ್ ಬೀರುವಿನ ಕೀ, ಪ್ರಮುಖ ಕಡತಗಳು ಹಾಗೂ ಹೊಸ ಬಡಾವಣೆಗಳ ವಿನ್ಯಾಸಕ್ಕೆ ಸಂಬಂಧಿಸಿದ ಎಲ್ಲ ಬಗೆಯ ದಾಖಲಾತಿಗಳನ್ನು ಗ್ರಾಪಂ ಪಿಡಿಒ ಮಂಜುಳಾ ತೆಗೆದುಕೊಂಡು ಹೋಗಿರುವುದು ಅಕ್ಷಮ್ಯ. ಇದರಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ಜನಪರ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಐತಿಹಾಸಿಕ ಮಾಲೇಕಲ್ ತಿರುಪತಿ ಶ್ರೀ ವೆಂಕಟರಮಣ ಸ್ವಾಮಿ ರಥೋತ್ಸವಕ್ಕೆ ಸ್ವಚ್ಛತೆ ಮಾಡಲಾಗದ ಸನ್ನಿವೇಶ ನಿರ್ಮಾಣವಾಗಿದೆ. ಈ ಸಂಬಂಧ ತಾಪಂ ಇಒ ಸತೀಶ್ ಅವರಿಗೂ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪಿಡಿಒ ಧೋರಣೆ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ತರಲಾಗಿದೆ. ಸರ್ಕಾರಿ ದಾಖಲೆಗಳನ್ನು ಅಕ್ರಮವಾಗಿ ಕೊಂಡೊಯ್ದಿರುವ ಪಿಡಿಒ ಅವರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಅಗ್ರಹಿಸಿದರು.

ಗ್ರಾಪಂ ಸದಸ್ಯರಾದ ಬೊಮ್ಮೇನಹಳ್ಳಿ ವಡ್ಡರಹಟ್ಟಿ ರೇವಣ್ಣ, ಸಿದ್ದರಹಳ್ಳಿ ರಾಜಣ್ಣ, ಕಾರೇಹಳ್ಳಿ ಈಶಣ್ಣ ದನಿಗೂಡಿಸಿದರು. ತಕ್ಷಣಪ್ರತಿಕ್ರಿಯಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಪಿಡಿಒ ವರ್ಗಾವಣೆ ಏನಾಗಿದೆ ತಿಳಿದುಕೊಳ್ಳಿ. ಇಂತಹ ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡುವುದು ಬೇಡ. ಸಂಜೆ ಎಲ್ಲರನ್ನೂ ಕರೆದು ಸಮಸ್ಯೆ ಇರ್ತ್ಯರ್ಥಪಡಿಸಲಾಗುವುದು ಎಂದು ದೂರುದಾರರನ್ನು ಸಮಾಧಾನಪಡಿಸಿದರು.

ವಿವಿಧೆಡೆ ಕೆರೆ ಒತ್ತುವರಿ ತೆರವಾಗಿಲ್ಲ

ಕಂತೇನಹಳ್ಳಿ ಕೆರೆ ಸೇರಿದಂತೆ ತಾಲೂಕಿನ ವಿವಿಧೆಡೆ ಕೆರೆ ಒತ್ತುವರಿಯಾಗಿದ್ದು ತೆರವು ಕಾರ್ಯ ನಡೆದಿಲ್ಲ. ಕೆಲ ಅಧಿಕಾರಿಗಳು ಸರ್ಕಾರಿ ಭೂಮಿಯನ್ನು ಪ್ರಭಾವಿಗಳಿಗೆ ನೀಡಿರುವುದು ದಾಖಲೆಗಳಿಂದ ಸಾಬೀತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹೊಸಹಳ್ಳಿ ವೀರಭದ್ರಪ್ಪ ದೂರಿದರು.

ನನ್ನ ಸೊಸೆಗೆ ಗೃಹಲಕ್ಷ್ಮೀ ಹಣ ಬರುತ್ತಿಲ್ಲ ಎಂದು ಲಾಯಲಾಪುರ ಗ್ರಾಮದ ಮರಿಯಪ್ಪ ಹೇಳಿದರು. ಗಂಡಸಿ ಪೊಲೀಸರು ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮುದುಡಿ ತಾಂಡ್ಯದ ದೇವಿಬಾಯಿ ದೂರಿದರು. ತೂಬಿನಕೆರೆ ಗ್ರಾಮದ ಹಲವರು ಸರ್ಕಾರಿ ಜೆ.ಸಿ.ಆಸ್ಪತ್ರೆ ಆಂಬುಲೆನ್ಸ್ ಲೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಜಾಡಘಟ್ಟ ಗ್ರಾಮಸ್ಥರು ಅರಣ್ಯ ಇಲಾಖೆಯಿಂದ ನೀಡುತ್ತಿರುವ ಕಿರುಕುಳ ತಪ್ಪಿಸಿ ಎಂದು ಅಲವತ್ತುಕೊಂಡರು. ಮತ್ತೆ ಕೆಲವರು ರಸ್ತೆ ಅಭಿವೃದ್ಧಿಪಡಿಸಿ ಎಂದು ಮನವಿ ನೀಡಿದರೆ, ಇನ್ನಷ್ಟು ಜನರು ಪಂಚಾಯಿತಿ ಅಧಿಕಾರಿಗಳಿಗೆ ಹೇಳಿ ಮನೆ ಕೊಡಿಸಿ ಎಂದು ಜನಸಂಪರ್ಕಸಭೆಯಲ್ಲಿ ಅಹವಾಲು ಹೇಳಿಕೊಂಡರು.

ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಿ

ಎಲ್ಲವನ್ನೂ ಸಮಾಧಾನದಿಂದಲೇ ಆಲಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ರೈತರಿಗೆ ಅರಣ್ಯ ಇಲಾಖೆಯವರು ತೊಂದರೆ ಕೊಡಬಾರದು, ಪೊಲೀಸ್ ಅಧಿಕಾರಿಗಳು ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಸೆಸ್ಕ್ ಅಧಿಕಾರಿಗಳು ಗ್ರಾಮೀಣ ಭಾಗದ ಜನರಿಗೆ ತೊಂದರೆ ಎದುರಾಗದಂತೆ ನಿರಂತರ ಜ್ಯೋತಿ ವಿದ್ಯುತ್ ಪೂರೈಕೆ ಮಾಡಬೇಕು. ಗೃಹಲಕ್ಷ್ಮೀ ಹಣ ಬಾರದವರನ್ನು ಗುರುತಿಸಿ ಸರ್ಕಾರದ ಸವಲತ್ತು ಕಲ್ಪಿಸುವ ಕೆಲಸ ಮಾಡಿದರೆ ಒಳ್ಳೆಯ ಹೆಸರು ಬರಲಿದೆ. ಸೂರು ಇಲ್ಲದವರಿಂದ ಹೊಸದಾಗಿ ಅರ್ಜಿ ಪಡೆದು ಸಂಕಷ್ಟ ತಪ್ಪಿಸುವ ಕೆಲಸ ಪಿಡಿಒಗಳ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು. ನಗರಸಭೆ ವತಿಯಿಂದ ಬಿ ಖಾತಾ ಫಲಾನುಭವಿಗಳಿಗೆ ಇ ಸ್ವತ್ತು ವಿತರಿಸಿದರು.

ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ತಾಲೂಕು ಪಂಚಾಯಿತಿ ಇಒ ಸತೀಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಧರ್ಮಶೇಖರ್, ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್, ಸದಸ್ಯರಾದ ಜಿ.ಟಿ.ಗಣೇಶ್, ದರ್ಶನ್, ಮಂಜುಳಾಬಾಯಿ, ಜಾಜೂರು ಸಿದ್ದೇಶ್, ಮಾಡಾಳು ಯೋಗೀಶ್ ಇತರರು ಇದ್ದರು.