ಜೊಯಿಡಾ: ಶ್ರೀಮಂತರು ತಾವು ಮಾಡಿರುವ ಅರಣ್ಯ ಅತಿಕ್ರಮಣವನ್ನು ಬಿಟ್ಟುಕೊಡಲು ಮುಂದೆ ಬರಬೇಕು. ಅರಣ್ಯ ಇಲಾಖೆ 1978ರ ಏಪ್ರಿಲ್ ನಂತರದಲ್ಲಿ ಅತಿಕ್ರಮಣ ಮಾಡಿ ರೆಸಾರ್ಟ್‌ಗಳನ್ನು ನಿರ್ಮಿಸಿದ ಶ್ರೀಮಂತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.
ಜೊಯಿಡಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ತಾಪಂ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಅರಣ್ಯ ಅತಿಕ್ರಮಣ ಮಾಡಿ ರೆಸಾರ್ಟ್‌ಗಳನ್ನು ನಿರ್ಮಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕ ದೇಶಪಾಂಡೆ ಕಿಡಿಕಾರಿದರು.
1978ರ ನಂತರದಲ್ಲಿ ಅರಣ್ಯ ಅತಿಕ್ರಮಣ ಮಾಡಿದ ಶ್ರೀಮಂತರು ಯಾರೇ ಇದ್ದರೂ, ಯಾವುದೇ ಪಕ್ಷದವರಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿ ಎಂದು ಆರ್‌ವಿಡಿ ಸೂಚಿಸಿದರು. ಇದೇ ವೇಳೆ ಬಡ ಅತಿಕ್ರಮಣದಾರರಿಗೆ ತೊಂದರೆ ನೀಡದಂತೆ ಎಚ್ಚರಿಕೆಯನ್ನೂ ನೀಡಿದರು.
ಜೊಯಿಡಾವನ್ನು ಸಾವಯವ ತಾಲೂಕಾಗಿ ಘೋಷಿಸಲು ಯತ್ನಿಸುತ್ತಿದ್ದೇವೆ. ಬೆಳೆ ಹಾನಿ ಬಗ್ಗೆ ರೈತರ ಹೊಲಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಗಲಬೇಟದಲ್ಲಿ ಕೃಷಿ ಇಲಾಖೆ ಜಾಗ ಅತಿಕ್ರಮಣ ಮಾಡಿರುವುದನ್ನು 15 ದಿನದಲ್ಲಿ ತೆರವುಗೊಳಿಸಬೇಕು. ಯಾವುದೇ ಸರ್ಕಾರಿ ಕಟ್ಟಡ ಕಟ್ಟಿರುವ ಜಾಗ ಆಯಾ ಇಲಾಖೆಯ ಹೆಸರಲ್ಲಿ ಆಗಬೇಕು. 30 ದಿನಗಳಲ್ಲಿ ಈ ಕೆಲಸವನ್ನು ಮುಗಿಸಬೇಕು ಎಂದು ಕಂದಾಯ ಮತ್ತು ಅರಣ್ಯ ಇಲಾಖೆಗೆ ಸೂಚನೆ ನೀಡಿದರು.
ಆಶ್ರಯ ಯೋಜನೆಯ ವಿಷಯ ಬಂದಾಗ 425 ಮನೆ ಜೊಯಿಡಾಕ್ಕೆ ಮಂಜೂರಿ ಅಗಿತ್ತು. ಆನ್‌ಲೈನ್‌ನಲ್ಲಿ ನೋಂದಣಿಗೆ ಅಕ್ಟೋಬರ್ 10 ಕೊನೆಯ ದಿನವಾಗಿತ್ತು. ಆದರೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡ ಕಾರಣ ಹಲವರಿಗೆ ನೋಂದಣಿ ಮಾಡಲು ಸಾಧ್ಯವಾಗಿಲ್ಲ ಎಂದು ಸಭೆಗೆ ತಾಪಂ ಅಧಿಕಾರಿಗಳು ಗಮನಕ್ಕೆ ತಂದರು.
ಪ್ರತಿಕ್ರಿಯಿಸಿದ ದೇಶಪಾಂಡೆ, ಈ ಬಗ್ಗೆ ವಸತಿ ಸಚಿವರಲ್ಲಿ ಮಾತನಾಡಿ ಇನ್ನಷ್ಟು ದಿನ ಅವಕಾಶ ನೀಡುವಂತೆ ಪ್ರಯತ್ನಿಸುತ್ತೇನೆ ಎಂದರು.
ಕಂದಾಯ, ಆರೋಗ್ಯ, ತೋಟಗಾರಿಕಾ , ಹೆಸ್ಕಾಂ ಇತರ ಇಲಾಖೆಯ ಪ್ರಗತಿ ಪರಿಶೀಲಿಸಲಾಯಿತು. ತಹಸೀಲ್ದಾರ್ ಮಂಜುನಾಥ ಮುನ್ನೊಳಿ, ತಾ.ಪಂ ಇಒ ಸಂತೋಷ ಎ. ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.