ಜಿಲ್ಲೆ

ಶಾಲೆಯಲ್ಲಿ ಕುಡುಕರ ದರಬಾರು

ಸೋಮು ಲದ್ದೀಮಠ ರೋಣ

ಅಲ್ಲಲ್ಲಿ ಕುಡಿದು ಎಸೆದ ಮದ್ಯದ ಬಾಟಲಿಗಳು. ಸೇದಿ ಬಿಸಾಕಿದ ಸಿಗರೇಟ್ ತುಣುಕುಗಳು… ಇದು ಯಾವುದೋ ಮದ್ಯದಂಗಡಿ ಅಥವಾ ಬಾರ್-ರೆಸ್ಟೋರೆಂಟ್​ನಲ್ಲಿ ಕಂಡುಬಂದ ದೃಶ್ಯವಲ್ಲ; ಮಕ್ಕಳ ಭವಿಷ್ಯ ರೂಪಿಸುವ ಜ್ಞಾನ ಮಂದಿರದ ಆವರಣದ ದುಸ್ಥಿತಿ ಇದು.

ಕರೊನಾ ಹಾವಳಿಯಿಂದ ಬಾರ್​ಗಳಲ್ಲಿ ಕುಳಿತು ಕುಡಿಯುವುದನ್ನು ಬಂದ್ ಮಾಡಲಾಗಿದೆ. ಹೀಗಾಗಿ, ಮದ್ಯ ಪಾರ್ಸಲ್ ತೆಗೆದುಕೊಳ್ಳುವ ಕೆಲವರಿಗೆ ಶಾಲೆ ಆವರಣಗಳೇ ಮೋಜಿನ ತಾಣ. ತಾಲೂಕಿನ ಕುರಹಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳು ಮದ್ಯಪಾನ ಮಾಡಿ, ಮದ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್ ಗ್ಲಾಸುಗಳನ್ನು ಅಲ್ಲೇ ಎಸೆದು ಹೋಗುತ್ತಿದ್ದಾರೆ. ಇದರಿಂದ ಶಾಲೆಯ ಸುಂದರ ವಾತಾವರಣ ಹಾಳಾಗುತ್ತಿದೆ.

ಕರೊನಾ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇರುವುದು ಕೆಲ ಪುಂಡರಿಗೆ ಅನುಕೂಲವಾದಂತಾಗಿದೆ. ಸಂಜೆಯಾಗುತ್ತಿದ್ದಂತೆ ಶಾಲೆಯ ಮೈದಾನದಲ್ಲಿ ಕುಳಿತು ಮದ್ಯಪಾನ ಮಾಡುವುದು ಸಾಮಾನ್ಯವಾಗಿದೆ. ಪವಿತ್ರವಾದ ಶಾಲೆ ಆವರಣದಲ್ಲಿ ಮದ್ಯ ಸೇವನೆ ಮಾಡಬೇಡಿ ಎಂದು ಹಲವು ಬಾರಿ ತಿಳಿವಳಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಕೆಲವರಂತೂ ಬುದ್ದಿ ಹೇಳುವವರ ಮೇಲೆರಗಿ ಬರುತ್ತಾರೆ. ಕಾಂಪೌಂಡ್​ಗೆ ಬೀಗ ಹಾಕಿದರೂ ಅದನ್ನು ಒಡೆದು ಕುಡುಕರು ಒಳಗೆ ನುಗ್ಗುತ್ತಾರೆ. ಇದರಿಂದ ಶಾಲೆಗೆ ಭದ್ರತೆಯೇ ಇಲ್ಲದಂತಾಗಿದೆ. ಕೂಡಲೆ ಪೊಲೀಸರು ನಿಯಮಬಾಹಿರ ಚಟುವಟಿಕೆಯಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಲೆ ವಾತಾವರಣ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮನಸ್ಸಿನ ಮೇಲೆ ದುಷ್ಪರಿಣಾಮ: ಹಗಲಿನಲ್ಲಿ ಶಾಲೆಯ ಮಕ್ಕಳು ಇಲ್ಲಿ ಆಡಲು ಬರುತ್ತಾರೆ. ಆದರೆ, ಇಲ್ಲಿಯ ವಾತಾವರಣ ಅವರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವಂತಿದೆ. ಅಲ್ಲಲ್ಲಿ ಎಸೆಯಲಾದ ಮದ್ಯದ ಬಾಟಲಿಗಳನ್ನು ತುಳಿದು ಕೆಲ ಮಕ್ಕಳು ಗಾಯಗೊಂಡಿದ್ದಿದೆ. ಗ್ರಾಮದ ಹಿರಿಯರು ಬುದ್ಧಿ ಹೇಳಿದರೂ ಕುಡುಕರು ಅದಕ್ಕೆ ಬೆಲೆ ಕೊಡುತ್ತಿಲ್ಲ. ಇದಕ್ಕೆ ಪೊಲೀಸ್ ಕ್ರಮವೇ ಸೂಕ್ತ ಎನ್ನುತ್ತಾರೆ ಗ್ರಾಮಸ್ಥರು.

ಕೆಲ ಕಿಡಿಗೇಡಿಗಳಿಂದ ಶಾಲೆ ವಾತಾವರಣವೇ ಹಾಳಾಗಿ ಹೋಗಿದೆ. ಕಾಂಪೌಂಡ್​ಗೆ ಬೀಗ ಹಾಕಿದರೂ ಅದನ್ನು ಒಡೆದು ಕುಡುಕರು ಒಳಗೆ ನುಗ್ಗುತ್ತಾರೆ. ಇದರಿಂದ ಶಾಲೆಗೆ ಭದ್ರತೆಯೇ ಇಲ್ಲದಂತಾಗಿದೆ. ಜ್ಞಾನ ನೀಡುವ ದೇಗುಲದಲ್ಲಿ ಇಂತಹ ಚಟುವಟಿಕೆ ನಡೆಯುತ್ತಿರುವುದು ಬೇಸರವುಂಟು ಮಾಡಿದೆ. | ಶಂಕರಗೌಡ ಪಾಟೀಲ ಎಸ್​ಡಿಎಂಸಿ ಅಧ್ಯಕ್ಷಕೆಲವರು ಮದ್ಯ ತಂದು, ಗ್ರಾಮದ ಸರ್ಕಾರಿ ಶಾಲೆ ಕಾಂಪೌಂಡ್ ಬೀಗ ಮುರಿದು ಮೈದಾನದಲ್ಲಿ ಕುಳಿತು ಸೇವನೆ ಮಾಡುತ್ತಿದ್ದಾರೆ. ಇದರಿಂದ ನಮಗೂ ಸಾಕಾಗಿ ಹೋಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರಲಾಗುವುದು.| ಎಸ್.ಬಿ. ಕಡಬಲಕಟ್ಟಿ ಕುರಹಟ್ಟಿ ಗ್ರಾ.ಪಂ. ಪಿಡಿಒ