ಮಂಡ್ಯ: ಅರವತ್ತು ವರ್ಷ ತುಂಬಿದ ಟೈಲರ್‌ಗಳಿಗೆ ಮಾಸಿಕ ಪಿಂಚಣಿ ನೀಡಬೇಕು. ಅಂತೆಯೇ ಜೀವನ ಭದ್ರತೆಯನ್ನು ಒದಗಿಸಲು ಟೈಲರ್ ಕ್ಷೇಮ ನಿಧಿ ಮಂಡಳಿಯನ್ನು ರಚಿಸುವಂತೆ ಒತ್ತಾಯಿಸಿ ಟೈಲರ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈಗಾಗಲೇ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು, ಕಾರ್ಮಿಕ ಸಚಿವರು ಹಾಗೂ ಸಂಸದರು ಮತ್ತು ರಾಜ್ಯ ಸರ್ಕಾರಕ್ಕೆ ವೃತ್ತಿ ನಿರತ ಟೈಲರ್‌ಗಳ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರೂ ಸಹ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮಾಸಿಕ ಪಿಂಚಣಿ ಜಾರಿ ಮಾಡಬೇಕು. ಆರೋಗ್ಯ ವಿಮೆ, ಟೈಲರ್ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಭವಿಷ್ಯ ನಿಧಿಯನ್ನು ಕೂಡಲೇ ಆರಂಭಿಸಬೇಕು. 15 ದಿನದೊಳಗೆ ಬೇಡಿಕೆ ಈಡೇರಿಕೆಗೆ ಕ್ರಮ ವಹಿಸದಿದ್ದರೆ ಬೆಂಗಳೂರು ಚಲೋ ಸೇರಿದಂತೆ ತೀವ್ರ ರೀತಿಯ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.