ಚಿಕ್ಕೋಡಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಪೋಕ್ಸೊ ಪ್ರಕರಣದಡಿ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಲೋಕೇಶ್ವರ ಸ್ವಾಮೀಜಿ ಬಂಧನದ ಬೆನ್ನಲೆ ಸ್ವಾಮೀಜಿ ಇರುವ ಮಠದ ಕಟ್ಟಡ ತೆರವುಗೊಳಿಸುವಂತೆ ರಾಯಬಾಗ ತಹಸೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ.
ಲೋಕೇಶ್ವರ ಸ್ವಾಮೀಜಿ ನಿರ್ಮಿಸಿರುವ ರಾಮ ಮಂದಿರ, ಚಾಮುಂಡೇಶ್ವರಿ ದೇವಿ ಗುಡಿ ಮತ್ತು ಅನ್ನ ಪ್ರಸಾದ ಕಟ್ಟಡಗಳನ್ನು ಮೇಖಳಿ ಗ್ರಾಮದಲ್ಲಿ ಇರುವ ಸ.ನಂ.225 ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದೆ. ಇದು ಸರ್ಕಾರದ ಗಾಯರಾಣ ಜಮೀನಾಗಿರುವುದರಿಂದ ನೋಟಿಸ್ ಜಾರಿ ಮಾಡಿದ ಏಳು ದಿನಗಳ ಒಳಗಾಗಿ ಕಟ್ಟಡ ತೆರವು ಮಾಡಬೇಕು ಎಂದು ಆರೋಪಿ ಲೋಕೇಶ್ವರ ಸ್ವಾಮೀಜಿಗೆ ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಮಠದ ವಸ್ತು ಸ್ಥಳಾಂತರ: ಮೇಖಳಿ ಗ್ರಾಮದ ಲೋಕೇಶ್ವರ ಸ್ವಾಮೀಜಿ ಎರಡು ದಿನಗಳ ಹಿಂದೆ ಸ್ವಾಮೀಜಿ ಬಂಧನವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಕೆಲವರು ಮಠಕ್ಕೆ ನುಗ್ಗಿ ಮಠದಲ್ಲಿದ್ದ ಬೆಳ್ಳಿ ಮೂರ್ತಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಗ್ರಾಮದ ಹಿರಿಯರು ಮಠದಲ್ಲಿನ ಇನ್ನೂಳಿದ ವಸ್ತುಗಳನ್ನು ಮಠದಿಂದ ಸುರತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಮಠದ ವಸ್ತುಗಳನ್ನು ಗ್ರಾಮದ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ಬಳಸುತ್ತೇವೆ ಎಂದು ತಿಳಿಸಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಸ್ಥಳದಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ರಾಯಬಾಗ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ವಿತರಣಾ ಕೇಂದ್ರಕ್ಕೆ ಒತ್ತಾಯ: ಅಕ್ರಮವಾಗಿ ನಿರ್ಮಾಣವಾಗಿರುವ ಮಠದ ಜಾಗದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಸರ್ಕಾರ ಮಂಜೂರಾತಿ ನೀಡಿತ್ತು. ಆ ಪ್ರಕಾರ ಅನಧಿಕೃತ ಕಟ್ಟಡ ತೆರವುಗೊಳಿಸಿ ಅಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.