ಜಿಲ್ಲೆ

ಸರ್ಕಾರಿ ನೌಕರರ ತವರೂರು ತಗ್ಗಿಕುಪ್ಪೆ

* ಕೃಷಿ, ಹೈನುಗಾರಿಕೆಗೆ ಉತ್ತೇಜನ * ಗ್ರಾಮೀಣ ಸೊಗಡು ಜೀವಂತ *ಹಲವು ವೈಶಿಷ್ಟ್ಯಕ್ಕೆ ಸಾಕ್ಷಿ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ಪ್ರತಿಯೊಂದು ಗ್ರಾಮಗಳು ತನ್ನದೆ ಆದ ವೈಶಿಷ್ಟ್ಯಹೊಂದಿವೆ. ಅಂತಹ ಗ್ರಾಮಗಳಲ್ಲಿ ತಗ್ಗಿಕುಪ್ಪೆಯೂ ಒಂದು. ಇದು ಸಾಕಷ್ಟು ಗ್ರಾಮೀಣ ಸೊಗಡನ್ನು ಹೊದ್ದುಕೊಂಡಿದೆ.

ಮಾಗಡಿಯಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ತಗ್ಗಿಕುಪ್ಪೆ ಸುಮಾರು 300 ವರ್ಷಕ್ಕೂ ಹಳೆಯ ಗ್ರಾಮವಾಗಿದೆ. ತಗ್ಗುಪ್ರದೇಶದಲ್ಲಿ ಇರುವುದರಿಂದ ಗ್ರಾಮಕ್ಕೆ ತಗ್ಗಿಕುಪ್ಪೆ ಎಂಬ ಹೆಸರು ಬಂದಿದೆ. ಮಾಗಡಿ ಪಟ್ಟಣದ ಜನತೆಗೆ ತಗ್ಗಿಕುಪ್ಪೆ ಗ್ರಾಮದಿಂದ ಪಂಪ್‌ಹೌಸ್ ಮೂಲಕ ಸುಮಾರು 15 ವರ್ಷ ಕುಡಿಯುವ ನೀರು ಸರಬರಾಜು ಮಾಡಲಾಗುತಿತ್ತು. ಈಗ ಮಂಚನಬೆಲೆ ಜಲಾಶಯ ಹಾಗೂ ಕೊಳವೆ ಬಾವಿಗಳಿಂದ ಪೂರೈಸಲಾಗುತ್ತಿದೆ.

ಗ್ರಾಮದಲ್ಲಿ ಬಹುತೇಕ ಮಂದಿ ಬೆಸ್ಕಾಂ, ರೇಷ್ಮೆ, ಕಂದಾಯ, ಆರೋಗ್ಯ ಇಲಾಖೆ ಸೇರಿ ಹಲವು ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಗ್ರಾಮದ ಪ್ರತಿ ಮನೆಯಲ್ಲೊಬ್ಬರಂತೆ ಸರ್ಕಾರಿ ಉದ್ಯೋಗಿಗಳು ಇದ್ದಾರೆ.

ಕೆಲವರು ಸರ್ಕಾರಿ ಉದ್ಯೋಗಕ್ಕೆ ತೆರಳಿ ಗ್ರಾಮದಲ್ಲಿ ಇದ್ದರೆ ಮತ್ತೆ ಕೆಲವರು ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಇನ್ನು ಬಹುತೇಕರು ನಿವೃತ್ತಿಹೊಂದಿದ ಬಳಿಕ ಗ್ರಾಮಕ್ಕೆ ಮರಳಿ ವ್ಯವಸಾಯದಲ್ಲಿ ತೊಡಗಿ ಪ್ರಗತಿಪರ ರೈತರಾಗಿ ಯುವ ಪೀಳಿಗೆಗೆ ವ್ಯವಸಾಯದ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ. ಗ್ರಾಮದಲ್ಲಿ 240 ಮನೆಗಳಿದ್ದು, 850ಕ್ಕೂ ಹೆಚ್ಚು ಮತದಾರರು ಗ್ರಾಮದಲ್ಲಿ ನೆಲೆಸಿದ್ದಾರೆ. ಸರ್ಕಾರಿ ಉದ್ಯೋಗ ಬಿಟ್ಟರೆ ಉಳಿದಂತೆ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿ ಜೀವನದ ಬಂಡಿ ಸಾಗಿಸುತ್ತಿದ್ದಾರೆ.

ಮಾರಮ್ಮ ಹಬ್ಬ ವಿಜೃಂಭಣೆ

ಗ್ರಾಮದಲ್ಲಿ ಪುರಾತನ ಆಂಜನೇಯ ಸ್ವಾಮಿ, ಮಾರಮ್ಮ ದೇವಾಲಯ ಪ್ರಮುಖವಾಗಿದ್ದು, ಯುಗಾದಿಗೂ ಮುನ್ನ ಗ್ರಾಮದೇವತೆ ಮಾರಮ್ಮ ದೇವಿಯ ಊರ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬಕ್ಕೆ ತಾಲೂಕಿನ ಹಲವೆಡೆಯಿಂದ ಭಕ್ತರು ಆಗಮಿಸುತ್ತಾರೆ. ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಹಾಸ್ಟೆಲ್, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಲು ಉತ್ಪಾದಕ ಸಹಕಾರ ಸಂಘ, ಅಂಚೆ ಕಚೇರಿ, ಗ್ರಾಮ ಪಂಚಾಯಿತಿ, ಪಶು ಆಸ್ಪತ್ರೆ ಸೇರಿ ಅವಶ್ಯಕ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಿದ್ಧ ಶ್ರೀ ರಂಗನಾಥ ಸ್ವಾಮಿಯ ಕೊಡುಗೆಯಾದ ಜಮೀನು ಗ್ರಾಮದಲ್ಲಿದ್ದು, ಕೊಡುಗೆ ಜಮೀನಿನಲ್ಲಿ ವ್ಯವಸಾಯ ಮಾಡುವವರು ಪ್ರತಿ ವರ್ಷ ಗೌರಮ್ಮನ ಕೆರೆಯಲ್ಲಿ ಶ್ರೀ ರಂಗನಾಥ ಸ್ವಾಮಿಯ ತೆಪ್ಪೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುವುದು ವಾಡಿಕೆ.

ಪೌರಾಣಿಕ ನಾಟಕ ಪ್ರದರ್ಶನ

ಗ್ರಾಮದಲ್ಲಿ ಹಳೇ ದೇವಾಲಯವನ್ನು ಕೆಡವಲಾಯಿತು. ಮತ್ತೆ ದೇವಾಲಯ ನಿರ್ಮಾಣ ಮಾಡಲಿಲ್ಲ. ಗ್ರಾಮದಲ್ಲಿ ಪ್ಲೇಗ್ ಪಸರಿಸಿದಾಗ ಗ್ರಾಮಸ್ಥರು ಭಯ ಬಿದ್ದು, ಗ್ರಾಮತೊರೆದು ತಮ್ಮ ಜಮೀನಿನ ಬಳಿ ಗುಡಿಸಲು ಹಾಕಿಕೊಂಡು ವಾಸವಿದ್ದರು. ನಂತರ ಗ್ರಾಮದಲ್ಲಿ ದೇವಾಲಯ ನಿರ್ಮಿಸಿ ಗ್ರಾಮಕ್ಕೆ ಮರಳಿದ್ದು ವಿಶೇಷ. ತಾಲೂಕಿನಲ್ಲಿ ಅತಿ ಹೆಚ್ಚು ಪೌರಾಣಿಕ ನಾಟಕ ಪ್ರದರ್ಶನಗಳು ನಡೆಯುತ್ತಿದ್ದವು. ಒಂದೇ ದಿನ 6 ನಾಟಕಗಳು ನಡೆಯುತ್ತಿದ್ದವು. ಈಗ ದಿನೇದಿನೆ ಕಡಿಮೆಯಾಗಿದೆ.

ಪ್ರತಿಮನೆಗಳಲ್ಲಿ ಸರ್ಕಾರಿ ಉದ್ಯೋಗಿಗಳಿರುವುದು ಗ್ರಾಮದ ಹಿರಿಮೆ. ಗ್ರಾಮದಲ್ಲಿ ಯಾರೇ ಜಗಳವಾಡಿದರೂ ಗ್ರಾಮದೇವತೆ ಹಬ್ಬದ ವೇಳೆ ಒಗ್ಗಟ್ಟಾಗಿ ಹಬ್ಬನಡೆಸಿಕೊಂಡು ಬರುವುದು ಮತ್ತೊಂದು ವಿಶೇಷ. ಗ್ರಾಮದಲ್ಲಿ ಸಂಬಂಧಿಕರೆ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರೂ ಐಕ್ಯತೆ, ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದೇವೆ.

ರವಿಕುಮಾರ್, ತಗ್ಗಿಕುಪ್ಪೆ