*ಮಾವು, ರೇಷ್ಮೆ, ತೆಂಗು ಬೆಳೆಯೇ ಪ್ರಧಾನ
* ಪ್ರತಿದಿನ ಸಾವಿರಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಸುತ್ತಲೂ ಪ್ರಕೃತಿಯ ವನಸಿರಿ. ಮಾವು, ರೇಷ್ಮೆ, ತೆಂಗು ತೋಟಗಳ ನಡುವಣ ಋಷಿಮುನಿಗಳ ಪಾದಸ್ಪರ್ಶಿಸಿದ, ಆಯುರ್ವೇದ ಪಂಡಿತರಿಂದ ಗುರುತಿಸಿಕೊಂಡ ಗ್ರಾಮವೇ ತಡಿಕವಾಗಿಲು.
ರಾಮನಗರ ತಾಲೂಕಿನ ಕೂಟಗಲ್ ಹೋಬಳಿ ತಡಿಕವಾಗಿಲು ಗ್ರಾಮ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿ ಜಿಲ್ಲೆಯಲ್ಲಿ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡು ಸರ್ವರ ಸಹಬಾಳ್ವೆಗೆ ಸಾಕ್ಷಿಯಾಗಿದೆ.
ಜಿಲ್ಲಾ ಕೇಂದ್ರ ರಾಮನಗರದಿಂದ 17 ಕಿಮೀ ಅಂತರದಲ್ಲಿದ್ದು, ತಾಲೂಕು ಕೇಂದ್ರ ಮಾಗಡಿ ರಸ್ತೆಯಲ್ಲಿನ ಅಗಲಕೋಟೆ ಹ್ಯಾಂಡ್‌ಪೋಸ್ಟ್ ರಸ್ತೆಯ ಪ್ರಮುಖ ಗ್ರಾಮ ಜಾಲಮಂಗಲ ಗ್ರಾಪಂ ವ್ಯಾಪ್ತಿಯಲ್ಲಿದೆ. ಬಸ್ ಮತ್ತು ರಸ್ತೆ ಸಂಪರ್ಕ ಗ್ರಾಮಕ್ಕಿದೆ. ಸುಮಾರು ಒಂದು ಸಾವಿರ ಜನಸಂಖ್ಯೆ ಹೊಂದಿದ್ದು, ಗ್ರಾಮದಲ್ಲಿ ಹೆಚ್ಚು ಮಾವು, ರೇಷ್ಮೆ, ತೆಂಗು ಬೆಳೆಗಾರರಿದ್ದು, ಪ್ರಮುಖ ಕಸುಬಾಗಿ ಹೈನುಗಾರಿಕೆ ಅವಲಂಬಿಸಿದ್ದಾರೆ.
ತೆಂಗು, ಅಡಕೆ, ಮಾವು ಸೇರಿ ತೋಟದ ಬೆಳೆಗಳನ್ನೂ ಹೆಚ್ಚಾಗಿ ರೈತರು ಬೆಳೆಯುತ್ತಾರೆ. ರೇಷ್ಮೆ, ಮಾವು ಬೆಳೆ ಪ್ರಮುಖ ವಾಣಿಜ್ಯ ಬೆಳೆಗಳಾಗಿದ್ದು, ಕೆಲವು ರೈತರು ರೇಷ್ಮೆ ಬೆಳೆಯಲ್ಲೇ ಯಶಸ್ಸು ಕಂಡುಕೊಂಡಿದ್ದಾರೆ.
ಮಣ್ಣಿನ ಬೀದಿ ರಸ್ತೆ, ಎತ್ತ ನೋಡಿದರೂ ನಾಡಹೆಂಚಿನ ಮಣ್ಣಿನ ಗೋಡೆಗಳಿಂದ ಕೂಡಿದ ಮನೆಗಳು ಈಗ ಕಾಂಕ್ರೀಟ್ ಮನೆಗಳಾಗಿವೆ. ಬೀದಿ ರಸ್ತೆಗಳಲ್ಲಿ ಸಿಮೆಂಟ್ ಕಂಡು ಸುಂದರ ಗ್ರಾಮವಾಗಿ ಬೆಳೆಯುತ್ತಿದೆ. ಜಾಲಮಂಗಲ ಗ್ರಾಪಂ ಹಂತ ಹಂತವಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ಅಂತೆಯೇ, ಸರ್ಕಾರಿ ಅಂಗನವಾಡಿ, ಕೂಸಿನಮನೆ, 1 ರಿಂದ 7ನೇ ತರಗತಿವರೆಗೆ ಸರ್ಕಾರಿ ಶಾಲೆ ಇತ್ತಾದರೂ 6 ವರ್ಷಗಳ ಹಿಂದೆ ಜಾಲಮಂಗಲ ಗ್ರಾಮದ ಶಾಲೆಗೆ ಸೇರ್ಪಡೆಯಾದ ಕಾರಣ ಗ್ರಾಮದಲ್ಲಿ ಶಾಲೆ ಇಲ್ಲ. ಹಾಲಿನ ಡೇರಿ ಇದ್ದು, ಪ್ರತಿದಿನ ಒಂದು ಸಾವಿರಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗುತ್ತಿದೆ.
ಗ್ರಾಮದಲ್ಲಿ ಆಂಜನೇಯ, ಬಸವೇಶ್ವರ, ಮಾರಮ್ಮ, ಜಡೇಮುನೇಶ್ವರಸ್ವಾಮಿ, ತೊರೆ ಮಲ್ಲೇಶ್ವರಸ್ವಾಮಿ, ಪಾದದೆರೆ ಆಂಜನೇಯಸ್ವಾಮಿ, ಕಗ್ಗಲ್ಲು ಆಂಜನೇಯಸ್ವಾಮಿ ದೇವಾಲಯಗಳಿವೆ. ಪ್ರತಿವರ್ಷ ಯುಗಾದಿ ಹಬ್ಬದ 20ನೇ ದಿನಕ್ಕೆ ಗ್ರಾಮ ದೇವತೆಗಳ ಹಬ್ಬ ಅದ್ದೂರಿಯಾಗಿ ನಡೆಯುತ್ತದೆ. ಬಸವೇಶ್ವರ, ಮಾರಮ್ಮದೇವರ ಅಗ್ನಿಕೊಂಡಗಳು ನಡೆಯುತ್ತವೆ. ಗ್ರಾಮ ದೇವತೆಗಳ ಹಬ್ಬ ಆದ ತಿಂಗಳ ನಂತರ ಆಂಜನೇಯಸ್ವಾಮಿಗೆ ಹರಿಸೇವೆ ಹಬ್ಬ ಮಾಡಲಾಗುತ್ತದೆ. ಇದು ಗ್ರಾಮದ ಬಹುದೊಡ್ಡ ಹಬ್ಬ. ಮಾಂಸಾಹಾರ ಊಟ ಏರ್ಪಾಡಾಗಿ ಸುಮಾರು 5 ರಿಂದ 6 ಸಾವಿರ ಜನಕ್ಕೆ ಅನ್ನಸಂತರ್ಪಣೆ ನಡೆಸಲಾಗುತ್ತದೆ. ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣ ಆಗಿದೆ ಎನ್ನಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ಹಾವು ಕಡಿತವಾದವರಿಗೆ ಔಷಧ, ಕೈ ಕಾಲು ಉಳುಕಿದರೆ ಉಳುಕು ತೆಗೆಯುವುದು ಸಣ್ಣ ಪುಟ್ಟ ಆರೋಗ್ಯ ಚರ್ಮರೋಗ ಸಮಸ್ಯೆ ಇರುವವರಿಗೆ ಔಷಧವನ್ನು ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಕೆಲವು ಕುಟುಂಬಗಳಲ್ಲಿ ನೀಡುತ್ತಾ ಬರಲಾಗುತ್ತಿದೆ. ಸುತ್ತಮುತ್ತಲ ಗ್ರಾಮಗಳಿಂದ ಗ್ರಾಮಕ್ಕೆ ಬಂದು ಜನರು ಈಗಲೂ ಚಿಕಿತ್ಸೆ ಪಡೆಯುತ್ತಾರೆ.
ಕೆಂಡದಯ್ಯನಕೆರೆ, ಊರಮುಂದಿನ ಕೆರೆಗಳಿವೆ. ಜತೆಗೆ ಕಣ್ವ ನದಿ ಗ್ರಾಮದ ಪಕ್ಕವೇ ಹಾದು ಹೋಗಿದೆ. ಕೆರೆ ನೀರು ಮತ್ತು ನದಿ ನೀರು ಅಂತರ್ಜಲಮಟ್ಟಕ್ಕೆ ಪೂರಕವಾಗಿದೆ. ಕಣ್ವ ನದಿ ಮಳೆ ಬಂದ ಸಂದರ್ಭದಲ್ಲಿ ಮಾತ್ರ ಹರಿಯುತ್ತದೆ. ವರ್ಷಪೂರ್ತಿ ನದಿ ಹರಿಯುವಂತೆ ಪೈಪ್‌ಲೈನ್ ಮುಖಾಂತರ ನೀರು ಹರಿಸಿದರೆ ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಗಳು ಹಸಿರಿನಿಂದ ಕಂಡು ಮತ್ತಷ್ಟು ಕೃಷಿಗೆ ಉತ್ತೇಜನ ಸಿಗುತ್ತದೆ ಎಂಬುದು ಗ್ರಾಮಸ್ಥರು ಮಾತು.
ಮಕ್ಕಳಾಗದೆ ಇರುವವರು ಗ್ರಾಮದ ತೊರೆ ಮಲ್ಲೇಶ್ವರ ದೇವರನ್ನು ಪೂಜಿಸಿ ದೇವಾಲಯದ ಮುಂದೆ ಇರುವ ಬಾವಿಯಲ್ಲಿ ನೀರು ಹಾಕಿಸಿಕೊಂಡರೆ ಸಂತಾನಭಾಗ್ಯ ಆಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಗ್ರಾಮದ ಹಿರಿಯರು.
ತೊರೆ ಮಲ್ಲೇಶ್ವರ ದೇವಾಲಯವಿರುವ ಸ್ಥಳದಲ್ಲಿ ಈ ಹಿಂದೆ ಋಷಿ ಮುನಿಗಳು ಇದ್ದರಂತೆ. ಅಲ್ಲೇ ತಪಸ್ಸು ಮಾಡುತ್ತಿದ್ದರಂತೆ. ಕಾಲಕ್ರಮೇಣ ಜನರು ಪ್ಲೇಗ್ ಮತ್ತಿತರ ರೋಗಗಳು ಹರಡಿ ಜನರು ವಾಸ ಮಾಡುತ್ತಿದ್ದ ಗ್ರಾಮಗಳನ್ನು ಬಿಟ್ಟು ಬೇರೆ ಬೇರೆ ಕಡೆ ವಲಸೆ ಹೋಗುತ್ತಿದ್ದ ಸಂದರ್ಭದಲ್ಲಿ ಈಗಿನ ತಡಿಕವಾಗಿಲು ಬಳಿ ಋಷಿಮುನಿಗಳು ವಲಸೆ ಹೋಗುತ್ತಿದ್ದ ಜನರನ್ನು ತಡೆದು ನಿಲ್ಲಿಸಿ ಅವರಿಗೆ ಧೈರ್ಯ ಹೇಳಿ ಅಲ್ಲೇ ನೆಲೆಕಟ್ಟಿಕೊಟ್ಟರು ಎಂಬ ಗ್ರಾಮದ ಐತಿಹ್ಯವನ್ನು ಹಿರಿಯರು ಹೇಳುತ್ತಾರೆ. ಋಷಿಮುನಿಗಳು ತಡೆದು ನಿಲ್ಲಿಸಿದ ಕಾರಣ ತಡಿಕವಾಗಿಲು ಎಂದು ಕರೆದು ಗ್ರಾಮ ಹೊಸದಾಗಿ ಉದಯವಾಯಿತು ಎನ್ನುತ್ತಾರೆ.
ಗ್ರಾಮಕ್ಕೆ ಪೂರ್ವಿಕರ ಕಾಲದಿಂದಲೂ ಉತ್ತಮ ಹೆಸರಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಗ್ರಾಮ ಬೆಳೆದು ಬಂದಿದೆ. ಋಷಿಮುನಿಗಳು ಪಾದಸ್ಪರ್ಶ ಮಾಡಿದ ಪುಣ್ಯಭೂಮಿ ಗ್ರಾಮವಾಗಿದೆ. ದ್ವೇಷ, ಅಸೂಯೆ ಇಲ್ಲದೆ ಗ್ರಾಮದ ಜನರು ಜೀವನ ನಡೆಸುತ್ತಿದ್ದೇವೆ. ತಡಿಕವಾಗಿಲು ದಿನೇಶ್ಗ್ರಾಪಂ ಮಾಜಿ ಅಧ್ಯಕ್ಷ, ಜಾಲಮಂಗಲ