ಜಿಲ್ಲೆ

ಮಂಡ್ಯದ ಮಣ್ಣಿನ ಪರಂಪರೆಯೇ ಸಮೃದ್ಧ: ನಿವೃತ್ತ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಶ್ಲಾಘನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ಪರಂಪರೆಯು ಸಮೃದ್ಧವಾಗಿದೆ. ಮಾತ್ರವಲ್ಲದೆ ಪ್ರತಿಭೆಯ ಆಗರವಾಗಿದೆ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಶ್ಲಾಘಿಸಿದರು.

ನಗರದ ರೈತ ಸಭಾಂಗಣದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಷ್ಠಾನದ ಉದ್ಘಾಟನೆ, ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ, ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿ, ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧರಣಿ ಮಂಡಲ ಮಧ್ಯದೊಳಗೆ ಎಂಬ ಗೋವಿನ ಹಾಡು ಬರೆದಿರುವ ಕವಿಯು ಈ ಜಿಲ್ಲೆಯವರಾಗಿದ್ದಾರೆ. ಇಂತಹ ಹಲವು ಯಶಸ್ಸು ಸಿಕ್ಕಿರುವುದು ಮಂಡ್ಯದ ಭೂಮಿಯ ಮಣ್ಣಿನಿಂದ ಬಂದಿದೆ ಎನ್ನಬಹುದು. ಅದೇ ರೀತಿ ತಿಮ್ಮೇಗೌಡರು ನಡೆದು ಬಂದಿದ್ದಾರೆ, ಈ ಪ್ರತಿಷ್ಠಾಪನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗಲಿ ಎಂಬುದು ನನ್ನ ಆಶಯ. ಕೆ.ವಿ.ಶಂಕರಗೌಡ ಅವರಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಇವರು ಸೇರಿದಂತೆ ಎಚ್.ಡಿ.ಚೌಡಯ್ಯ ಅವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡಿ ಹೋಗಿದ್ದಾರೆ, ಅದರಂತೆ ಇಲ್ಲಿನ ಆದಿಚುಂಚನಗಿರಿ ಮಠವು ಸಹ ಶಿಕ್ಷಣದ ಸೇವೆ ನೀಡುತ್ತಿದೆ. ಜಿಲ್ಲೆಯ ಯುವಕರಿಗೆ ಬಹಳಷ್ಟು ಅವಕಾಶ ಇಲ್ಲಿಯೇ ಇದೆ. ಆದಾಗ್ಯೂ ಡ್ರೈವಿಂಗ್ ಸೇರಿದಂತೆ ಇತರೆ ಕೆಲಸಗಳಿಗೆ ಏಕೆ ಬೆಂಗಳೂರಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ವರುಣ ಚಳವಳಿಯ ನೇತೃತ್ವವನ್ನು ವಹಿಸಿಕೊಳ್ಳಿ ಎಂದಾಗ ಕೆ.ವಿ.ಶಂಕರಗೌಡ ಅವರು ಹಿಂಸಾತ್ಮಕ ಚಳವಳಿ ಆಗದೆ ಅಹಿಂಸಾತ್ಮಕ ಚಳವಳಿ ನಡೆದರೆ ಮಾತ್ರ ವಹಿಸಿಕೊಳ್ಳುತ್ತೇನೆ ಎಂದಿದ್ದರು. ಇದಕ್ಕೆ ವಿದ್ಯಾರ್ಥಿಗಳು ಬೆಂಬಲ ನೀಡಿದರು. ಸುಮಾರು ಮೂರು ತಿಂಗಳು ಕಾಲ ನಡೆಯಿತು. ಕರ್ನಾಟಕದ ಏಕೀಕರಣದ ನಂತರ ಆದ ಚಳವಳಿ ವರುಣ ಚಳವಳಿ ಯಶಸ್ವಿಯಲ್ಲಿ ಶೇಷಾದ್ರಿ ಅವರ ಶ್ರಮವು ಇದೆ ಎಂದು ಸ್ಮರಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಅತ್ಯಂತ ಆದರ್ಶ ಅಧಿಕಾರಿ. ಅವರ ಹೆಸರನ್ನು ಕೇಳಿದರೆ ಅವರಂತೆ ಆಗಬೇಕು ಎನ್ನುವ ಮನಸ್ಸು ಮೂಡಿಸುವ ವ್ಯಕ್ತಿತ್ವ ಚಿರಂಜೀವಿ ಸಿಂಗ್. ಅವರು ಸಾಹಿತ್ಯ ಪ್ರೇಮಿಯೂ ಆಗಿದ್ದರು. ಜಿಲ್ಲೆಯಲ್ಲಿ ತಿಮ್ಮೇಗೌಡರ ಹೆಸರಿನಲ್ಲಿ ಜಲ ಸಾಕ್ಷರತೆ ಉಂಟು ಮಾಡುವ ಉದ್ದೇಶ ಟ್ರಸ್ಟ್‌ಗಿದೆ. ಜತೆಗೆ ಸಾವಯವ ಕ್ಷೇತ್ರ, ಆರೋಗ್ಯ, ಬಡಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಉದ್ದೇಶವಿದೆ. ಸಾರ್ವಜನಿಕರು ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು. ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನ ಅಧ್ಯಕ್ಷ ಎ.ಸಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ಇತರರಿದ್ದರು.

ಇದೇ ಸಂದರ್ಭದಲ್ಲಿ ಜನಮುಖಿ ಐಎಎಸ್ ಅಧಿಕಾರಿ ಪ್ರಶಸ್ತಿಯನ್ನು ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ, ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ ಎಂ.ಎನ್.ಮಹೇಶ್ ಕುಮಾರ್ ಅವರಿಗೆ ಪ್ರಶಸ್ತಿ ಫಲಕ ಮತ್ತು ತಲಾ 25 ಸಾವಿರ ರೂ ಹಾಗೂ ಎಚ್.ಎಂ.ಅನುಷಾ ಮತ್ತು ಪ್ರಮೋದಿನಿ ಅವರಿಗೆ ಪ್ರತಿಭಾ ಪುರಸ್ಕಾರದ ಜತೆಗೆ ತಲಾ 5 ಸಾವಿರ ರೂ ನೀಡಲಾಯಿತು.