ಜಿಲ್ಲೆ

ಬೆಂ.ವಿವಿ ದಿನಗೂಲಿ ನೌಕರರಿಗೆ ಕನಿಷ್ಠ ವೇತನ ಪರಿಷ್ಕರಣೆಗೆ ಸಿಂಡಿಕೇಟ್‌ನಲ್ಲಿ ಒಪ್ಪಿಗೆ

ಎನ್.ಎಲ್. ಶಿವಮಾದು

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಕಚೇರಿ/ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 78 ದಿನಗೂಲಿ ನೌಕರರಿಗೆ ಸರ್ಕಾರದ ಪರಿಷ್ಕೃತ ವೇತನದ ಅದೇಶದ ಅನುಸಾರ ಕನಿಷ್ಠ ವೇತನವನ್ನು ಪರಿಷ್ಕರಿಸುವುದು ಮತ್ತು ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಸರ್ಕಾರದಿಂದ ಸ್ಪಷ್ಟೀಕರಣ ಪಡೆಯಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.

7ನೇ ವೇತನ ಆಯೋಗದ ಅನುಸಾರ ಸರ್ಕಾರ ನಿಗದಿ ಮಾಡಿರುವ ವೇತನವು ದಿನಗೂಲಿ ನೌಕರರಿಗೆ 2025ರ ಜ.1ರಿಂದ ಜಾರಿಗೆ ಬರುವಂತೆ ಹಣಕಾಸು ಸೌಲಭ್ಯವನ್ನು ಪರಿಷ್ಕರಣೆ ಮಾಡಲು ಒಪ್ಪಿಗೆ ನೀಡಲಾಗಿದೆ.

ಇಲ್ಲಿಯವರೆಗೂ ಬೆಂಗಳೂರು ವಿವಿಯಲ್ಲಿ 2006ಕ್ಕೆ ಹತ್ತು ವರ್ಷ ಸೇವೆ ಪೂರೈಸಿದ ದಿನಗೂಲಿ ನೌಕರರನ್ನು 2008ರಲ್ಲಿ ವಿಶ್ವವಿದ್ಯಾಲಯದಲ್ಲಿ ಸರ್ಕಾರದ ಅನುಮೋದನೆ ಅನುಸಾರ ಕಾಯಂಗೊಳಿಸಲಾಗಿದೆ. ಉಳಿಕೆ ಇರುವ 78 ದಿನಗೂಲಿ/ಮಾಸಿಕ ಕ್ರೋಢೀಕೃತ ವೇತನದ ತಾತ್ಕಾಲಿಕ ನೌಕರರು 1996ರ ಅವಧಿಯಲ್ಲಿ ನೇಮಕಗೊಂಡ ನೌಕರರಾಗಿದ್ದಾರೆ.

ಅವರಿಗೆ ಮಾಸಿಕ ಕ್ರೋಢೀಕೃತ ವೇತನದಡಿಯಲ್ಲಿ ಪ್ರತಿ ವರ್ಷ ಅವರ ಸೇವೆಯನ್ನು ಆಯಾ ಹುದ್ದೆಗಳಿಗೆ ಅನ್ವಯಿಸುವ ಮೂಲವೇತನ, ಶೇ.90ರಷ್ಟು ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯೊಂದಿಗೆ ಮುಂದುವರೆಸಲಾಗುತ್ತಿದೆ. ಈ ನೌಕರರು 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗಿದೆ.

ಕಾಯಂ ನೌಕರರಿಗೆ 2022ರ ಏ.1ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಜಾರಿಗೊಳಿಸಿದ್ದು, 2024ರ ಆಗಸ್ಟ್ 1ರಿಂದ ಪರಿಷ್ಕೃತ ವೇತನದಲ್ಲಿ ಹಣಕಾಸು ಸೌಲಭ್ಯಗಳನ್ನು ಮಂಜೂರು ಮಾಡಲಾಗಿದೆ. ದಿನಗೂಲಿ ನೌಕರರಿಗೆ ಪರಿಷ್ಕೃತ ವೇತನದನ್ವಯ ಕಾಲಿಕ ಶ್ರೇಣಿಯ ಕನಿಷ್ಠವೇತನವನ್ನು ಪರಿಷ್ಕರಿಸಲಾಗಿದೆ.

ವಿವಿಗೆ ಹೆಚ್ಚವರಿ 70 ಲಕ್ಷ ರೂ. ಹೊರೆ:

ದಿನಗೂಲಿ ನೌಕರರಿಗೆ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡುತ್ತಿರುವ ಪರಿಣಾಮ ವಿಶ್ವವಿದ್ಯಾಲಯಕ್ಕೆ ವಾರ್ಷಿಕ 70,03,860 ರೂ. ಹೆಚ್ಚುವರಿ ವೆಚ್ಚ ಭರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪತ್ರ

ವಿವಿ ವ್ಯಾಪ್ತಿಯಲ್ಲಿ ಖಾಲಿ ಇರುವ 20 ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವ ಸಂಬಂಧ ಸರ್ಕಾರದ ಸ್ಪಷ್ಟೀಕರಣ ಪಡೆದು ನೇಮಕಾತಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಸಿಂಡಿಕೇಟ್‌ನಲ್ಲಿ ನಿರ್ಧರಿಸಲಾಗಿದೆ.

ವಿವಿಯಲ್ಲಿರುವ 55 ಬ್ಯಾಕ್‌ಲಾಗ್ ಹುದ್ದೆಗಳಲ್ಲಿ 35 ಹುದ್ದೆಗಳನ್ನು ಈಗಾಗಲೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಭರ್ತಿ ಮಾಡಲಾಗಿದೆ. ಉಳಿದ 20 ಹುದ್ದೆಗಳಿಗೆ 2018 ಮತ್ತು 2021ರಲ್ಲಿ ಅಧಿಸೂಚನೆಯಲ್ಲಿ ಒಟ್ಟು 118 ಅರ್ಜಿಗಳು ಸ್ವೀಕೃತಗೊಂಡಿವೆ.

ಸರ್ವೋಚ್ಛ ನ್ಯಾಯಾಲಯದ ಎಸ್‌ಎಲ್‌ಪಿ ಧಾವೆ ಪ್ರಕರಣ ಬಾಕಿ ಇದ್ದ ಕಾರಣ ಬಾಕಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. 2024ರ ಮೇ 2ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದರಿಂದ ಹಾಗೂ ವಿಶ್ವವಿದ್ಯಾಲಯವು ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ಅನುಸರಿಸಬೇಕಾದ ನಿಯಮದ ಬಗ್ಗೆ ಸ್ಪಷ್ಟೀಕರಣ ಕೋರಿ ಬರೆದು ಪತ್ರಗಳಿಗೆ ಸರ್ಕಾರವು ಪ್ರತಿಕ್ರಿಯಿಸಿದ್ದು, ಬೆಂ.ವಿವಿಯಲ್ಲಿ ಖಾಲಿ ಇರುವ 20 ಬ್ಯಾಕ್‌ಲಾಗ್ ಹುದ್ದೆಗಳನ್ನು ವರ್ಗಾವಣೆ ಮಾಡಲು ತಿಳಿಸಿದೆ.

ಆದರೆ, ರಾಜ್ಯ ಸರ್ಕಾರವು 2024ರ ನ.25ರ ಸುತ್ತೋಲೆಯಲ್ಲಿ ನೇರ ನೇಮಕಾತಿಗೆ ಯಾವುದೇ ಅಧಿಸೂಚನೆ ಹೊರಡಿಸಬಾರದೆಂದು ಸೂಚಿಸಿರುವುದರಿಂದ ಹಾಗೂ ಒಳ ಮೀಸಲಾತಿ ಬಗ್ಗೆ ಸರ್ಕಾರದ ಮಟ್ಟದಲ್ಲಿ ಆಯೋಗವನ್ನು ರಚಿಸಿರುವುದರಿಂದ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಸ್ಪಷ್ಟೀಕರಣ ಪಡೆದು ನಂತರ ಮುಂದುವರಿಯಲು ತೀರ್ಮಾನಿಸಲಾಯಿತು ಎಂದು ಕುಲಪತಿ ಡಾ. ಎಸ್.ಎಂ. ಜಯಕರ್ ತಿಳಿಸಿದರು.

ಸರ್ಕಾರವು 7ನೇ ವೇತನ ಆಯೋಗದ ಪ್ರಕಾರ ಪರಿಷ್ಕರಿಸುವ ಮೊತ್ತದ ಅನುಗುಣವಾಗಿ ದಿನಗೂಲಿ ನೌಕರರಿಗೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ. - ಶೇಕ್ ಲತೀಫ್, ಬೆಂ.ವಿವಿ ಕುಲಸಚಿವ