ಮಂಡ್ಯ: ಶಿಕ್ಷಣದಲ್ಲಿ ದ್ವಿ ಭಾಷಾ ನೀತಿಯನ್ನ ಜಾರಿಗೆ ತರುವುದರ ಮೂಲಕ ಕನ್ನಡ ಭಾಷೆಯ ಬಳಕೆ ಮತ್ತೆ ಪ್ರಾಮುಖ್ಯತೆ ಹೆಚ್ಚಾಗಲಿದೆ. ಜತೆಗೆ ಭಾಷೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿಶ್ರಾಂತ ಆಂಗ್ಲಭಾಷಾ ಪ್ರಾಧ್ಯಾಪಕಿ ಪ್ರೊ.ಶ್ರೀದೇವಿ ಹೇಳಿದರು.
ನಗರದ ಸ್ವರ್ಣಸಂದ್ರದ ಎಇಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ದ್ವಿಭಾಷಾ ನೀತಿಯ ಅನಿವಾರ್ಯತೆ ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದ್ವಿಭಾಷಾ ನೀತಿಯನ್ನು ಕಡ್ಡಾಯಗೊಳಿಸು ವುದರಿಂದ ಪ್ರತಿಯೊಬ್ಬರು ಕನ್ನಡವನ್ನು ಶಿಕ್ಷಣದಲ್ಲಿ ಕಲಿಯುವಂತೆ ಕಡ್ಡಾಯಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ತ್ರಿ ಭಾಷಾ ನೀತಿಯಿಂದ ಮಕ್ಕಳಿಗೆ ಮಾನಸಿಕ ಒತ್ತಡ ಉಂಟಾಗುತ್ತಿದ್ದು, ದ್ವಿ ಭಾಷಾ ನೀತಿಯು ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತವಾಗುತ್ತದೆ. ಇದರಿಂದ ಕನ್ನಡ ಭಾಷೆಯ ಬಳಕೆ ಮತ್ತೆ ಅಧ್ಯಯನವನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ದ್ವಿ ಭಾಷಾ ನೀತಿಯಿಂದ ಮಕ್ಕಳು ಕನ್ನಡ ಮತ್ತು ಆಂಗ್ಲ ಭಾಷೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವುದರಿಂದ ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ಜತೆಗೆ ಕನ್ನಡ ಭಾಷೆಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುತ್ತದೆ. ಪ್ರಸ್ತುತ ದಿನಮಾನದಲ್ಲಿ ಮಕ್ಕಳು ಮಾತೃಭಾಷೆಯ ಜತೆಗೆ ಆಂಗ್ಲ ಕಲಿಕೆಯು ಅಗತ್ಯವಾಗಿದೆ. ದೀಪಾ ಬಸ್ತಿ ಅವರ ಆಂಗ್ಲ ಅನುವಾದದ ಮೂಲಕವೇ ಬಾನು ಮುಸ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ಲಭಿಸಿತು ಎನ್ನುವುದನ್ನು ಮನಗಾಣಬೇಕು. ಶಿಕ್ಷಣದಲ್ಲಿ ಯಾವುದೇ ಗೊಂದಲ ಮೂಡಿಸದೆ ದ್ವಿಭಾಷಾ ನೀತಿಯನ್ನು ಜಾರಿ ಮಾಡಿ ಕನ್ನಡ ಭಾಷೆಯ ಉಳಿಮೆಗೆ ಶ್ರಮಿಸಬೇಕೆಂದರು.
ಚಿಂತಕ ಡಾ.ಕೆ.ಪಿ.ನಟರಾಜ್ ಮಾತನಾಡಿ, ತ್ರಿಭಾಷಾ ಸೂತ್ರ ಗುಲಾಮಗಿರಿಯ ಸಂಕೇತವಾಗಿದು,್ದ ಇದರಿಂದ ಬಿಡುಗಡೆ ಹೊಂದುವ ಮನಸ್ಥಿತಿ ಕನ್ನಡಿಗರಲ್ಲಿ ಕ್ಷೀಣಿಸುತ್ತಿ ುವುದು ವಿಷಾದನೀಯ ಸಂಗತಿ. ಕನ್ನಡಿಗರೆಲ್ಲರೂ ಕೂಡ ದ್ವಿಭಾಷಾ ನೀತಿಯ ಪರವಾಗಿರಬೇಕೆಂದರು.
ಎಇಟಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕ ಎಚ್.ಪಿ.ಧರ್ಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಸಹಾಯಕ ಪ್ರಾಧ್ಯಾಪಕರಾದ ಸುಕೇಶ್, ದಯಾನಂದ್, ಮೋಹನ್‌ದಾಸ್, ವಾಣಿ, ಶ್ರೀದೇವಿ, ರಕ್ಷಿತಾ ಇತರರಿದ್ದರು.