ಗಂಗಾವತಿಯ ಗ್ರಾಮದೇವತೆ ಶ್ರೀ ದುರ್ಗಾದೇವಿ ರಥೋತ್ಸವ ಸೋಮವಾರ ಸರಳವಾಗಿ ನೆರವೇರಿಸಲಾಯಿತು.  
ಜಿಲ್ಲೆ

ಸಾಂಕೇತಿಕವಾಗಿ ನಡೆದ ಗಂಗಾವತಿ ಗ್ರಾಮದೇವತೆ ದುರ್ಗಾದೇವಿ ಜಾತ್ರೋತ್ಸವ: ಐದು ಹೆಜ್ಜೆಗೆ ಸೀಮಿತ ರಥೋತ್ಸವ

ಗಂಗಾವತಿ: ಕರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ನಗರದ ಗ್ರಾಮದೇವತೆ ಶ್ರೀ ದುರ್ಗಾದೇವಿ ರಥೋತ್ಸವ ಸೋಮವಾರ ಬೆಳಗ್ಗೆ ಸರಳವಾಗಿ ನೆರವೇರಿಸಲಾಯಿತು.

ಜಾತ್ರೆ ರದ್ದುಗೊಳಿಸಿದ್ದರೂ, ಸಂಪ್ರದಾಯದಂತೆ ಸರ್ವಾಲಂಕೃತ ರಥೋತ್ಸವವನ್ನು ಐದು ಹೆಜ್ಜೆ ಎಳೆಯಲಾಯಿತು. ಬೆಳಗ್ಗೆಯಿಂದಲೇ ದೇವಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ, ಮಹಾಮಂಗಳಾರತಿ ಮತ್ತು ಹೋಮ ಹಮ್ಮಿಕೊಳ್ಳಲಾಗಿತ್ತು. ಕಲ್ಲುಮಠದ ಬಳಿ ವಾಲ್ಮೀಕಿ ನಗರದಿಂದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಜಿಲ್ಲಾಡಳಿತದ ಸೂಚನೆಯಂತೆ ಸರಳ ರೀತಿಯಲ್ಲಿ ಆಚರಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ತಿಳಿಸಿದರು.

ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ದೇವಾಲಯ ಸಮಿತಿ ಪದಾಧಿಕಾರಿಗಳಾದ ಬಿ.ಅಶೋಕ, ಅಮರಜ್ಯೋತಿ ವೆಂಕಟೇಶ, ಜೋಗದ ಹನುಮಂತಪ್ಪ ನಾಯಕ, ಮುಖಂಡರಾದ ಯಂಕಪ್ಪ ಕಟ್ಟಿಮನಿ, ಯು.ಲಕ್ಷ್ಮಣ, ಬಿ.ನಾಗರಾಜ್, ನಾಗರಾಜ ಚಳಗೇರಿ, ದುರುಗಪ್ಪ ನಾಯಕ, ಯಮನೂರ ಚೌಡ್ಕಿ ಇತರರಿದ್ದರು.