ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಸಾಂಕೇತಿಕವಾಗಿ ಸಸಿ ನೆಟ್ಟು ನೀರೆರೆಯಲಾಯಿತು. ಮಮ್ತಾಜ್‌ಬಾನು, ಗಿರೀಶ್, ಹರೀಶ್, ಸುದೇಶ್, ಮಹೇಶ್‌ನಾಯಕ, ಶಶಿಕುಮಾರ್ ಇತರರು ಇದ್ದರು.  
ಜಿಲ್ಲೆ

ಪ್ರಜಾಪ್ರಭುತ್ವ ದಿನಾಚರಣೆಗೆ ಸಾಂಕೇತಿಕ ಚಾಲನೆ

ಶಿವಶಂಕರ್ ಎಂ. ಹೆಬ್ಬಳ್ಳ

ಹನೂರು : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛತೆ ಹಾಗೂ ಸುಂದರೀಕರಣ ಸಂಬಂಧ 19 ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಭಾಗವಹಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಶೋಕ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15 ರಂದು ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ವತಿಯಿಂದ ಜಿಲ್ಲೆಯ ಸರಹದ್ದಿನ ಮೂಗೂರು ಕ್ರಾಸ್‌ನಿಂದ ಚಾ.ನಗರದ ಪಚ್ಚಪ್ಪ ಸರ್ಕಲ್‌ವರೆಗೆ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಭಾಗವಹಿಸುವಿಕೆಯು ಸಹ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಪಪಂ ಸದಸ್ಯರಿಗೆ ತಿಳಿಸಿದರು.

ದಿನಾಚರಣೆಯ ಅಂಗವಾಗಿ ಪಪಂ ವ್ಯಾಪ್ತಿಯಲ್ಲಿ 19 ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಇದೀಗ ಸಸಿ ನೆಡುವುದರ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದೆ. ಹಾಗೆಯೇ ಸೆ.15 ರಂದು ಪಪಂನ ಪೌರ ಕಾರ್ಮಿಕರಿಗೆ ಸ್ವಚ್ಛತೆ ಅರಿವು ಕಾರ್ಯಕ್ರಮ, 16 ರಂದು ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, 17 ರಂದು ಸದಸ್ಯರೊಂದಿಗೆ ವಾರ್ಡ್‌ಗಳಿಗೆ ತೆರಳಿ ಹಸಿ ಹಾಗೂ ಒಣ ಕಸದ ಬಗ್ಗೆ ಅರಿವು, 18 ರಂದು ಆರ್.ಎಸ್. ದೊಡ್ಡಿ ಕೆರೆಯ ಸ್ವಚ್ಛತೆ, 19 ರಂದು ಪಟ್ಟಣದಲ್ಲಿ ಶ್ರಮದಾನ, 20 ರಂದು ವಾರ್ಡ್‌ಗಳಲ್ಲಿ ಸಸಿ ನೆಡುವ ಕಾರ್ಯಕ್ರಮ, 21 ರಂದು ಕಸ ವಿಂಗಡಣೆಯ ಬಗ್ಗೆ ಅರಿವು, 22 ರಂದು ಸ್ವ ಸಹಾಯ ಸಂಘದವರಿಗೆ ಅರಿವು ಕಾರ್ಯಕ್ರಮ, 23 ರಂದು ಪೌರ ಕಾರ್ಮಿಕರಿಂದ ಸ್ವಚ್ಛತಾ ಅರಿವು ಜಾಥಾ, 24 ರಂದು ಸ್ವಚ್ಛತಾ ಕಾರ್ಯಕ್ರಮ, 25 ರಂದು ಪಪಂ ವ್ಯಾಪ್ತಿಯ ವಾಣಿಜ್ಯ ಪ್ರದೇಶಗಳಲ್ಲಿ ಸುಂದರೀಕರಣ, 26 ರಂದು ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸುಂದರೀಕರಣ, 27 ರಂದು ಬೃಹತ್ ತ್ಯಾಜ್ಯ ಸಂಗ್ರಹಿಸುವವರಿಗೆ ಅರಿವು ಕಾರ್ಯಕ್ರಮ, 28 ರಂದು ಘನತ್ಯಾಜ್ಯ ಘಟಕದಲ್ಲಿ ಹೂ ಗಿಡ ನೆಡುವ ಕಾರ್ಯಕ್ರಮ, 29 ರಂದು ಪಟ್ಟಣದಲ್ಲಿ ಸ್ವಚ್ಛತೆ, 30 ರಂದು ಸ್ವಚ್ಛತೆ ಬಗ್ಗೆ ಅರಿವು ಕಾರ್ಯಕ್ರಮ, ಅ.1 ರಂದು ಶಾಲಾ ಮಕ್ಕಳಿಂದ ಸ್ವಚ್ಛತೆ ಹಾಗೂ 2 ರಂದು ಶಾಲಾ ಮಕ್ಕಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಂದ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ತಿಳಿಸಿದರು. ಪ.ಪಂ. ಅಧ್ಯಕ್ಷೆ ಮಮ್ತಾಜ್ ಬಾನು, ಸದಸ್ಯರಾದ ಗಿರೀಶ್, ಸುದೇಶ್, ಮಹೇಶ್‌ನಾಯಕ, ಹರೀಶ್‌ಕುಮಾರ್, ಇನ್‌ಸ್ಪೆಕ್ಟರ್ ಶಶಿಕುಮಾರ್, ಪಪಂ ಪ್ರಭಾರ ಆರೋಗ್ಯಾಧಿಕಾರಿ ಮಾದೇಶ್, ಪಪಂ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.