ಉಡುಪಿ: ಜಾತ್ರೆ, ಉತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ ವಿಧಾನ ಮಾತ್ರ ನಡೆಸುವಂತೆ ಹಾಗೂ ಈಗಾಗಲೇ ನಿಶ್ಚಯವಾಗಿರುವ ಮದುವೆ, ನಿಶ್ವಿತಾರ್ಥ ಮುಂತಾದ ಸಮಾರಂಭಗಳನ್ನು ಹೆಚ್ಚು ಜನ ಸೇರಲು ಅವಕಾಶ ನೀಡದೆ, ಹತ್ತಿರದ ಸಂಬಂಧಿಗಳೊಂದಿಗೆ ಮಾತ್ರ ಆಚರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಜಿಲ್ಲೆಯಲ್ಲಿ ಕರೊನಾ ಕುರಿತಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಾಯ್ದೆಯಲ್ಲಿ ಸೂಚಿಸಿರುವಂತೆ ಕಠಿಣ ಕ್ರಮ ಜರುಗಿಸಲಾಗುವುದು. ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ವಿಧಿಸಿರುವ ನಿರ್ಬಂಧಗಳನ್ನು, ಸಂಬಂಧಪಟ್ಟ ಸಂಸ್ಥೆಗಳು ಮತ್ತು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸಬೇಕು.
ವಿದೇಶಗಳಿಂದ ಆಗಮಿಸುವವರು ರೋಗ ಲಕ್ಷಣ ಇಲ್ಲದಿದ್ದರೂ ಸಹ ೧೪ ದಿನಗಳ ಕಾಲ ಮನೆಯಲ್ಲಿಯೇ ಇರಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ರೋಗ ಲಕ್ಷಣ ಇರುವ ರೋಗಿಗಳನ್ನು ನಿರ್ಲಕ್ಷಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ, ಪ್ರತಿ ಆಸ್ಪತ್ರೆಯಲ್ಲಿ ೨ ಐಸೋಲೇಟೆಡ್ ಕೊಠಡಿ ಮೀಸಲಿಡುವಂತೆ ಸೂಚನೆ ನೀಡಲಾಗಿದೆ ಎಂದರು. ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡಾ ಜತೆಗಿದ್ದರು.