ಜಿಲ್ಲೆ

ವಿಜಯನಗರದ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದಲ್ಲಿ ಸೆ.22 ರಂದು ಸ್ವಯಂವರ ಪಾರ್ವತಿ ಯಾಗ

ಪಂಕಜ ಕೆ.ಎಂ.

ಬೆಂಗಳೂರು: ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ಗಂಗಾಧರೇಶ್ವರ ಸ್ವಾಮಿ ಮತ್ತು ಶ್ರೀ ಪಾರ್ವತಿ ದೇವಿ ದೇವಾಲಯದ ಸಮುದಾಯ ಭವನದಲ್ಲಿ ಸೆ.22ರಂದು ವಿಜಯವಾಣಿ ಹಾಗೂ ಕನ್ನಡ ಮ್ಯಾಟ್ರಿಮೊನಿ ಸಹಯೋಗದಲ್ಲಿ ‘ಸ್ವಯಂವರ ಪಾರ್ವತಿ ಯಾಗ’ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9 ಗಂಟೆಗೆ ಯಾಗ ಆರಂಭವಾಗಲಿದೆ. ಇದರಲ್ಲಿ ಪಾಲ್ಗೊಂಡವರಿಗೆ ವಿವಾಹ ತೊಡಕುಗಳು ನಿವಾರಣೆಯಾಗಲಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಯಾಗದಿಂದ ಕಂಕಣಬಲ: ಸ್ವಯಂವರ ಪಾರ್ವತಿ ಯಾಗದಲ್ಲಿ ಪಾಲ್ಗೊಳ್ಳುವ ಭಾವೀ ವಧು ಮತ್ತು ವರರಿಗೆ ಅತೀ ಶೀಘ್ರವಾಗಿ ಕಂಕಣ ಭಾಗ್ಯ ಕೂಡಿ ಬರುವ ನಂಬಿಕೆ ಇದೆ. ಪುರಾಣಗಳ ಪ್ರಕಾರ ಸ್ವಯಂವರ ಮಂತ್ರ ಉಪದೇಶದ ನಂತರ ಶಿವ - ಪಾರ್ವತಿ ಯಾಗ ಮಹತ್ವ ಪಡೆದಿದೆ. ಪೂರ್ವಜನ್ಮದ ದೋಷಗಳಿಂದಲೂ ಮದುವೆ ವಿಳಂಬ ಆಗುತ್ತಿರುತ್ತದೆ. ಯಾಗ ಮಾಡಿದರೆ ಎಲ್ಲ ದೋಷಗಳು ಪರಿಹಾರಗೊಳ್ಳುತ್ತವೆ. ಭಾವೀ ವಧು-ವರರು ಮಾತ್ರವಲ್ಲ, ಸಂಸಾರದಲ್ಲಿ ನೆಮ್ಮದಿ ಇಲ್ಲದವರೂ ಯಾಗದಲ್ಲಿ ಪಾಲ್ಗೊಳ್ಳುವ ಮೂಲಕ ಶಾಂತಿ ಹೊಂದಬಹುದಾಗಿದೆ.

ಪೌರಾಣಿಕ ಹಿನ್ನೆಲೆ: ಪರಮೇಶ್ವರನೊಂದಿಗೆ ಪಾರ್ವತಿ ಜಗಳ ಮಾಡಿಕೊಂಡು ಭೂ ಲೋಕಕ್ಕೆ ಬರುತ್ತಾಳೆ.ಆಗ ಪಾರ್ವತಿಯನ್ನು ಮರೆತ ಶಿವನು ಏಕಾಂತಕ್ಕೆ ಹೊರಟು ಹೋಗುತ್ತಾನೆ. ಇದರಿಂದ ಲಯಕಾರ್ಯಗಳೆಲ್ಲ ಅಸ್ತವ್ಯಸ್ತವಾಗುತ್ತವೆ. ಈ ಪರಿಸ್ಥಿತಿ ಅರಿತ ಋಷಿ ಮುನಿಗಳು ಹಾಗೂ ದೇವತೆಗಳು ಪ್ರಾರ್ಥನೆ ಮೂಲಕ ಶಿವನನ್ನು ಎಚ್ಚರಿಸಲು ಪ್ರಯತ್ನಿಸುತ್ತಾರೆ. ಇತ್ತ ಭೂಲೋಕದಲ್ಲಿದ್ದ ಪಾರ್ವತಿ ಶಿವಲಿಂಗ ರಚಿಸಿ ತಪಸ್ಸು ಮಾಡುತ್ತಿರುತ್ತಾಳೆ. ಈ ವೇಳೆ ನಾರದರು ಆಗಮಿಸಿ ಸ್ವಯಂವರ ಮಂತ್ರ ಉಪದೇಶಿಸುತ್ತಾರೆ. ಪಾರ್ವತಿ ಈ ಮಂತ್ರವನ್ನು ಜಪಿಸಿದಾಗ ಶಿವನು ಎಚ್ಚರಗೊಂಡು ಭೂ ಲೋಕಕ್ಕೆ ಆಗಮಿಸುತ್ತಾನೆ. ನಂತರ ಪಾರ್ವತಿಯನ್ನು ವಿವಾಹವಾಗಿ ಕೈಲಾಸಕ್ಕೆ ಕರೆದೊಯುತ್ತಾನೆ. ಕೆಲವರಿಗೆ ಪೂರ್ವಜನ್ಮದ ಯಾವುದೋ ದೋಷಗಳು ವಿವಾಹ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿರುತ್ತವೆ. ಅಂಥವರು ಪಾರ್ವತಿ ಸ್ವಯಂವರ ಹೋಮ ಮಾಡಿಸಿ, ಪ್ರಸಾದ ಸ್ವೀಕರಿಸಿದರೆ ವಿವಾಹವಾಗುತ್ತದೆ ಎಂಬ ನಂಬಿಕೆ ಇದೆ.

ಜಾತಕ ತನ್ನಿ:ಸ್ವಯಂವರ ಪಾರ್ವತಿ ಯಾಗದಿಂದ ಜೀವನ ಸಂಗಾತಿ ಶೀಘ್ರ ದೊರಕಲು ಅನುವಾಗುತ್ತದೆ. ಯಾಗದಲ್ಲಿ ಪಾಲ್ಗೊಳ್ಳುವ ಭಾವೀ ವಧು-ವರರು ತಮ್ಮ ಭಾವಚಿತ್ರದೊಂದಿಗೆ ಜಾಗತಕವನ್ನು ತರುವಂತೆ ಕೋರಲಾಗಿದೆ. ಉಚಿತ ಹಾಗೂ ವಿಶೇಷ ಪೂಜೆ, ಸಂಕಲ್ಪ ಮತ್ತು ಪ್ರಸಾದಕ್ಕಾಗಿ ಮ್ಯಾಟ್ರಿ ಐಡಿಯನ್ನು ತೋರಿಸಬೇಕು. ವಿವರಗಳಿಗೆ ದೂ. 7538806555 ಸಂಪರ್ಕಿಸಬಹುದು.

ಸ್ಥಳ: ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ಗಂಗಾಧರೇಶ್ವರ ಸ್ವಾಮಿ ಮತ್ತು ಶ್ರೀ ಪಾರ್ವತಿ ದೇವಿ ದೇವಾಲಯದ ಸಮುದಾಯ ಭವನ, ವಿಜಯನಗರ, ಬೆಂಗಳೂರು 560040.