ಜಿಲ್ಲೆ

ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ರಥೋತ್ಸವ ಅದ್ದೂರಿ

ರೇಷ್ಮೆ ನಗರ ಡೆಸ್ಕ್

ಮಾಗಡಿ : ತಾಲೂಕಿನ ಕಂಚುಗಲ್ಲು ಬಂಡೇಮಠದ ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ರಥೋತ್ಸವ ಸೋಮವಾರ ನೂರಾರು ಹರಗುರು ಚರಮೂರ್ತಿ ಹಾಗೂ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ರಥೋತ್ಸವಕ್ಕೂ ಮುನ್ನಾ ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ದೇವಾಲಯದ ಸುತ್ತ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ಮೂಲಕ ಮೂರು ಸುತ್ತು ರಥೋತ್ಸವ ಎಳೆಯಲಾಯಿತು.

ಮಹಾ ರುದ್ರಾಭಿಷೇಕ, ಗಣಹೋಮ, ವಾಸ್ತು ಹೋಮ, ನವಗ್ರಹ ಹೋಮ, ಮಹಾ ಮೃತ್ಯುಂಜಯ ಹೋಮ, ಶ್ರೀ ಮಹಾರುದ್ರ ಹೋಮ, ಅಷ್ಟೋತ್ತರ, ಪೂರ್ಣಾಹುತಿ, ಆರೋಹಣ ಬಲಿ ಸೇರಿ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಿತು. ಸಾವಿರಾರು ಮಂದಿ ಭಕ್ತರಿಗೆ ಸೋಮವಾರ ಬೆಳಗ್ಗೆಯಿಂದಲ್ಲೆ ನಿರಂತರ ದಾಸೋಹ ನಡೆಯಿತು.

ಕಂಚುಗಲ್ಲು ಬಂಡೇಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ರಥೋತ್ಸವವನ್ನು ಪ್ರತಿ ವರ್ಷ ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ, ಗ್ರಾಮೀಣ ಭಾಗದ ರಥೋತ್ಸವಗಳು ತನ್ನದೆಯಾದ ವಿಶಿಷ್ಠ, ವೈಶಿಷ್ಠತೆ ಪಡೆದುಕೊಂಡಿವೆ. ರಥೋತ್ಸವ ಆಚರಣೆಯಿಂದ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ಐಕ್ಯತೆ ಮೂಡಲಿದೆ. ಗ್ರಾಮಗಳ ಜನರ ಒಂದಾಣಿಕೆ, ಒಗ್ಗಟ್ಟಿನ ಪ್ರದರ್ಶನ ಮೂಡುತ್ತದೆ. ನಮ್ಮ ಪೂರ್ವಿಕರು ಹಾಕಿಕೊಟ್ಟಿ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಮ್ಮೆಲ್ಲ ಮೇಲಿದೆ ಎಂದರು.

ಬಂಡೇಮಠ ಈ ಭಾಗದ ಜನರಿಗೆ ಶ್ರದ್ಧಾ, ಭಕ್ತಿ ಕೇಂದ್ರವಾಗಿದೆ. ಶ್ರೀಮಠದಿಂದ ನಡೆಯುತ್ತಿರುವ ವಿದ್ಯಾಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಸಾವಿರಾರು ಮಂದಿ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಶ್ರೀಮಠದಲ್ಲಿ ನಡೆಯುವ ದೀಪೋತ್ಸವ, ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸುತ್ತಾರೆ. ಭಕ್ತರ ಸಹಕಾರದಿಂದ ಶ್ರೀಮಠವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದರು.

ಹೊನ್ನಮ್ಮ ಗವಿಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಗುರುವಣ್ಣ ದೇವರ ಮಠದ ಶ್ರೀ ನಂಜುಂಡ ಸ್ವಾಮೀಜಿ, ಕಂಬಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ದೊಡ್ಡ ಮಠದ ಶ್ರೀ ಶಿವಬಸವ ಸ್ವಾಮೀಜಿ, ಹಾಸನ ತಣ್ಣಿರುಹಳ್ಳಿ ಹಳ್ಳಿ ಮಠದ ಶ್ರೀ ವಿಜಯಕುಮಾರಸ್ವಾಮೀಜಿ, ಬೇವೂರು ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಶಾಸಕ ಶ್ರೀನಿವಾಸ್, ಕನ್ನಡಸಂಘಟನೆಯ ಪಾಲನೇತ್ರ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷ ಶರ್ಮ, ತಾಪಂ ಮಾಜಿ ಸದಸ್ಯ ಶಂಕರಪ್ಪ, ಬಿಎಂಟಿಸಿ ಮಾಜಿ ನಿರ್ದೇಶಕ ಕೆ.ಪಿ.ಬೃಂಗೇಶ್, ಶರ್ಮ, ಗಂಗರಂಗಯ್ಯ, ಲಕ್ಕೇನಹಳ್ಳಿ ಗ್ರಾಪಂ ಅಧ್ಯಕ್ಷ ನಾರಾಯಣ್, ನಾಗರಾಜು, ಕಾಂತರಾಜು, ರಮೇಶ್ ಇತರರು ಇದ್ದರು.

ಕಂಚುಗಲ್ ಬಂಡೇಮಠ ಪೂರ್ವಕಾಲದಿಂದ ಇರುವ ಇತಿಹಾಸ ಹೊಂದಿರುವ ಮಠ, ಮಠವು ಕೃಷಿಯನ್ನೆ ಅವಲಂಭಿಸಿಕೊಂಡು ಬಂದಿದೆ. ಮಠದ ಶ್ರೀಗಳು ಉತ್ತಮ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. 35 ಮನೆಗಳಿರುವ ಈ ಗ್ರಾಮ ಇದಾಗಿದ್ದು, ಮಠಕ್ಕೆ ಆಧಾರ ಸ್ಥಂಭ ಭಕ್ತರು. ಪ್ರತಿವರ್ಷ ಭಕ್ತರ ಸಹಕಾರದಿಂದ ಹಾಗೂ ಸಿದ್ದಗಂಗಾ ಶ್ರೀಗಳ ಆಶಿರ್ವಾದದಿಂದ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ಮುಂದೆ ಮತ್ತಷ್ಟು ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಲಿ. ಶಿವಸಿದ್ದೇಶ್ವರ ಸ್ವಾಮೀಜಿ, ಸಿದ್ದಗಂಗಾ ಮಠದ ಕಿರಿಯ ಶ್ರೀ