:
ಮಾಗಡಿ: ಜಗತ್ತಿನ ಶಾಂತಿಗಾಗಿ, ಸಮಾಜದ ಕಲ್ಯಾಣಕ್ಕಾಗಿ ಮಠಗಳಿಗೆ ಉತ್ತರಾಧಿಕಾರಿಗಳ ನೇಮಕ ಅಗತ್ಯ ಎಂದು ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಗುಮ್ಮಸಂದ್ರದ ಶ್ರೀರುದ್ರಮುನೇಶ್ವರ ಮಠದ ನಿರಂಜನ ನಿರಾಭಾರಿ ಓಂಕಾರ ಸ್ವಾಮೀಜಿ ಪಟ್ಟಾಭಿಷೇಕ, ಶಿವಕುಮಾರ ಮಹಾಶಿವಯೋಗಿ ಭವನದ ಉದ್ಘಾಟನಾ ಸಮಾರಂಭ ಹಾಗೂ ಗುರುಶ್ರೀ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಮಠಮಾನ್ಯಗಳ ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ಸರ್ವೇ ಜನಾಃ ಸುಖಿನೋ ಭವಂತು ಎಂಬಂತೆ ಜಗತ್ತಿನಲ್ಲಿ ಎಲ್ಲರೂ ಸುಖ, ಶಾಂತಿ, ನೆಮ್ಮದಿಗಾಗಿ ಮಠಮಾನ್ಯಗಳ ಕೊಡುಗೆ ಅಮೋಘವಾದುದು. ಸಮಾಜದ ಕಲ್ಯಾಣಕ್ಕಾಗಿ ನಿಷ್ಕಲ್ಮಶ ಮನಸ್ಸಿನ ವಟುವನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಮೂಲಕ ಸಾಧನೆಗೆ ಪ್ರಾರ್ಥಿಸಲಾಗಿದೆ. ನಂಬಿಕೆ, ಶ್ರದ್ಧೆ, ಭಕ್ತಿಯಿಂದ ಹಾಗೂ ನಿರ್ಮಲ ಮನಸ್ಸಿನಿಂದ ಮಾಡಿದ ತಪ್ಪಸಿನ ಫಲವಾಗಿ ಜಗತ್ತಿನಲ್ಲಿ ಶಾಂತಿ, ಸಮಾದಾನ ಉತ್ತಮ ನಾಗರಿಕರನ್ನಾಗಿ ಮಾಡಲು ಸಾಧ್ಯವಿದೆ ಎಂದರು.
ಗುರು ಪರಂಪರೆಯನ್ನು ಮುಂದುವರಿಸಲು ಪೂರ್ವಜನ್ಮದ ಪುಣ್ಯದಫಲ ಇರಬೇಕು. ದೇವರ ಕೃಪೆಯಿಂದ ಈ ಮಠವನ್ನು, ಸಮಾಜವನ್ನು ಭಕ್ತ ಶರಣರನ್ನು ಸಮಚಿತ್ತದಿಂದ ಮುನ್ನಡೆಸಿಕೊಂಡು ಬರಲಿ, ಮಠವನ್ನು ಉದ್ಧಾರ ಮಾಡುವುದು ಶರಣರ ಶಕ್ತಿಗಿರಲಿ ಎಂದು ರುದ್ರಮುನೇಶ್ವರ ಮಠದ ನೂತನ ವಟು ಓಂಕಾರಸ್ವಾಮೀಜಿಗೆ ಶುಭ ಕೋರಿದರು.
ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮ ಸುಂದರ ಬದುಕನ್ನೇ ನಾಶಮಾಡುತ್ತಿದೆ. ಹಣ ಸಂಪಾದನೆ ಮಾಡಿ ಮನೆ ಕಟ್ಟಬಹುದು. ಸುಂದರವಾದ ಬದುಕು ಕಟ್ಟಿಕೊಳ್ಳಲು ಮನುಷ್ಯನಿಗೆ ಸಂಸ್ಕಾರ, ಸಂಸ್ಕೃತಿ ಬೇಕೇಬೇಕು. ಗುಮ್ಮಸಂದ್ರ ರುದ್ರಮುನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಮಠದ ಸಂಸ್ಕಾರದ ಸಾಧನೆಯ ಸಂಪತ್ತಿನ ಸಾಕ್ಷಿ ಪ್ರಜ್ಞೆಯನ್ನು ಉತ್ತರಾಧಿಕಾರಿ ಓಂಕಾರ ಸ್ವಾಮಿಗೆ ಅರ್ಪಿಸಿದ್ದಾರೆ. ಈಗ ಅವರು ಆಧ್ಯಾತ್ಮಿಕ, ಲೌಖಿಕ ಸಮಾಜದ ನಡುವೆ ಶರಣ ಭಕ್ತರಲ್ಲಿ ನಂಬಿಕೆ, ಶಾಂತಿ, ಸಮಾದಾನದ ಚಿತ್ತವನ್ನು ಬಿತ್ತಬೇಕು ಎಂದು ಆಶೀರ್ವಚನ ನೀಡಿದರು.
ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಸಿದ್ದಗಂಗೆಯ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗೆ ಸಮಾಜಕ್ಕೆ ಕೋಟ್ಯಂತರ ಸತ್ಪ್ರಜೆಗಳನ್ನು ನೀಡಿದ ಕೀರ್ತಿಯಿದೆ. ಗುಮ್ಮಸಂದ್ರದ ಶ್ರೀರುದ್ರಮುನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಕಷ್ಟದಲ್ಲಿ ಮಠವನ್ನು ಕಟ್ಟಿ ಬೆಳೆಸಿ ಉಳಿಸಿದ್ದಾರೆ. ಅದನ್ನು ಮುನ್ನಡೆಸುವುದು ಹೇಗೆ ಎಂದು ಕಣ್ಣೀರು ಹಾಕುವುದು ಬೇಡ, ನಿಮ್ಮೊಂದಿಗೆ ನಾವಿದ್ದೇವೆ. ಮಠದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಜನರಲ್ಲಿ ನಂಬಿಕೆ, ಆತ್ಮವಿಶ್ವಾಸ, ಆತ್ಮಶಾಂತಿಗಾಗಿ ಮಠದ ಪರಂಪರೆ ಅವಶ್ಯಕತೆಯಿದೆ. ಗದ್ದುಗೆ ಮಠದಲ್ಲಿ ಶರಣರು ನಡೆಸಿದ ಸಭೆಯಿಂದ ನನಗೆ ರಾಜಕೀಯ ಶಕ್ತಿ ದೊರಕಿದ್ದು, ಜೀವನದಲ್ಲಿ ಮರೆಯುವುದಿಲ್ಲ ಎಂದು ತಿಳಿಸಿದರು.
ಗುಮ್ಮಸಂದ್ರ ರುದ್ರಮುನೇಶ್ವರ ಮಠದ ಡಾ.ಚಂದ್ರಶೇಖರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಠ ನಡೆದುಬಂದ ಕಷ್ಟ ಹಾದಿಯನ್ನು ಸ್ಮರಿಸಿದರು. ಮಠದ ಏಳಿಗೆಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ನೂತನ ವಟು ಓಂಕಾರ ಸ್ವಾಮೀಜಿ ಮಾತನಾಡಿ, ನನ್ನ ಜೀವ ಸಮಾಜಕ್ಕೆ ಮುಡುಪಾಗಿರುವುದಾಗಿ ಭರವಸೆ ನೀಡಿದರು.
ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಸಿದ್ದಗಂಗಾ ಮಠ ಎಲ್ಲ ಮಠಗಳಲ್ಲಿ ಅಗ್ರಪಂಕ್ತಿಯಲ್ಲಿದೆ. ಮಠಗಳ ಮೂಲಕ ಸಮಾಜ ಸುಧಾರಣೆಯಾಗುತ್ತಿದೆ. ಗುಮ್ಮಸಂದ್ರ ಮಠ ಜಾತ್ಯತೀತ ಪರಿಕಲ್ಪನೆಯಡಿ ನಡೆಯುತ್ತಿರುವುದರಿಂದ ಆದರ್ಶವಾಗಿದೆ ಎಂದರು.
ಮಾಜಿ ಎಂಎಲ್ಸಿ ಆ.ದೇವೇಗೌಡ, ಮಾಜಿ ಶಾಸಕ ಎ.ಮಂಜುನಾಥ್, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಬಿಬಿಎಂಪಿ ಮಾಜಿ ಮೇಯರ್ ಗಂಗಾಂಭಿಕೆ ಮಲ್ಲಿಕಾರ್ಜುನ್ ಮಠದ ಅಭಿವೃದ್ಧಿ ಕುರಿತು ಮಾತನಾಡಿದರು.