ಜಿಲ್ಲೆ

ಭಾರತ ಮಠ-ಮಂದಿರಗಳ ದೇಶ ; ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ

Tumakuru

ತುಮಕೂರು : ನಮ್ಮ ರಾಷ್ಟ್ರವು ಮಂದಿರಗಳ ದೇಶ. ಈ ದೇಶದಲ್ಲಿರುವಷ್ಟು ಗುಡಿ-ಗುಂಡಾರಗಳು, ಮಠ-ಮಂದಿರಗಳನ್ನು ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಅರಳೇಪೇಟೆ ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಕುಂಭಾಭೀಷೇಕ ಅಂಗವಾಗಿ ಶನಿವಾರ ಆಯೋಜಿಸಿದ್ದ ಧಾರ್ಮಿಕ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ದೇಹಕ್ಕಿಂತಲೂ ಮಿಗಿಲಾಗಿ ದೇವರನ್ನು ಪ್ರೀತಿಸುವಂತಹ ಜನ ಯಾವ ದೇಶದಲ್ಲಾದರೂ ಇದ್ದರೆ ಅದು ಭಾರತದೊಳಗೆ ಮಾತ್ರ ಎಂಬ ವಿವೇಕವಾಣಿಯು ಸತ್ಯವಾದ ಮಾತಾಗಿದೆ ಎಂದರು.

ಒಂದು ಕಾಲದಲ್ಲಿ ಗುಡಿ ಗುಂಡಾರಗಳು ಶಿಕ್ಷಣ ಕೇಂದ್ರಗಳಾಗಿದ್ದವು, ನ್ಯಾಯಾಲಯಗಳಾಗಿದ್ದವು, ಪೊಲೀಸ್ ಠಾಣೆಗಳಾಗಿದ್ದವು. ಈಗ ಸರ್ಕಾರ ಹಾಗೂ ಖಾಸಗಿಯವರು ಶಾಲೆಗಳನ್ನು ಮಾಡಿದ್ದು ಈ ಶಿಕ್ಷಣ ಪದ್ಧತಿಗಿಂತ ಅಂದಿನ ಶಿಕ್ಷಣ ಪದ್ಧತಿಯೇ ಸರಿಯಿತ್ತು. ಇಂದಿನ ಶಿಕ್ಷಣದ ಗುಣಮಟ್ಟವನ್ನು ಮಕ್ಕಳ ಅಂಕಗಳ ಮೇಲೆ ಅಳೆಯಲಾಗುತ್ತದೆ. ಸಂಸ್ಕಾರವಂತ, ನೀತಿವಂತ, ದೇಶದ ಬಗ್ಗೆ ಅಭಿಮಾನ ಹೊಂದಿದ್ದಾನಾ ಎಂಬುದನ್ನು ಕಾಣಲು ಸಾಧ್ಯವಿಲ್ಲ ಎಂದು ಬೇಸರಿಸಿದರು.

ಅರಳೇಪೇಟೆ ಬಸವೇಶ್ವರ ದೇವಾಲಯವನ್ನು ಸುಮಾರು 1.70 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ್ದು, ಇದಕ್ಕೆ ಎಲ್ಲ ಸಮುದಾಯದ ಜನರು, 5 ಸಾವಿರದಿಂದ 10 ಲಕ್ಷದವರೆಗೆ ದೇಣಿಗೆ ನೀಡಿದ್ದಾರೆ ಎಂದು ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್ ಹೇಳಿದರು.

ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಎಸ್.ಜಿ.ಚಂದ್ರಮೌಳಿ, ದೇವಸ್ಥಾನ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಕೆ.ವೈ.ಸಿದ್ಧಲಿಂಗಮೂರ್ತಿ, ಸಿ.ವಿ.ಮಹದೇವಯ್ಯ, ಅತ್ತಿ ರೇಣುಕಾನಂದ, ಕೆ.ಜೆ.ರುದ್ರಪ್ಪ, ಕೆ.ಮಲ್ಲಿಕಾರ್ಜುನಯ್ಯ, ಮೋಹನ್‌ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.

ಸಾರೋಟ್‌ನಲ್ಲಿ ಶ್ರೀಗಳ ಮೆರವಣಿಗೆ : ಕಾರ್ಯಕ್ರಮ ಆರಂಭಕ್ಕೂ ಮುನ್ನ ಉಜ್ಜಯಿನಿ ಶ್ರೀಗಳನ್ನು ಸಾರೋಟ್‌ನಲ್ಲಿ ಕರೆತರಲಾಯಿತು. ಬಸವೇಶ್ವರ ದೇವಸ್ಥಾನದವರೆಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಂತರ ದೇವಸ್ಥಾನದಲ್ಲಿ ಮಹಾಗಣಪತಿ, ಜಗದ್ಗುರು ಶ್ರೀ ರೇಣುಕಾಚಾರ್ಯರ ಮತ್ತು ನವಗ್ರಹಗಳ ಪ್ರತಿಷ್ಠಾಪನೆಯನ್ನು ಶ್ರೀಗಳು ನೆರವೇರಿಸಿದರು. ಸಿದ್ಧರಬೆಟ್ಟ ಸುಕ್ಷೇತ್ರ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಬೃಹತ್ ನಂದಿ ವಿಗ್ರಹ ಅನಾವರಣಗೊಳಿಸಿದರು.

ನಮ್ಮ ದೇಶದ ಐಐಟಿಗಳು ಬೇರೆ ದೇಶಗಳಿಗೆ ಪ್ರತಿಭೆಯನ್ನು ರಫ್ತು ಮಾಡುವಂತಹ ಕಾರ್ಖಾನೆಗಳಾಗಿವೆ. ಪ್ರತಿಭೆಗೆ ಆಧಾರಿತ ಎಲ್ಲ ವ್ಯವಸ್ಥೆಯನ್ನೂ ಸರ್ಕಾರ ಉಚಿತವಾಗಿ ಸೀಟು ನೀಡುವ ಮೂಲಕ ಮಾಡುತ್ತದೆ. ಆದರೆ, ಐಐಟಿಯಲ್ಲಿ ಪದವಿ ಪಡೆದ ಮೇಲೆ ದೇಶ ಸೇವೆಗಿಂತ ದುಡ್ಡು-ಸಂಪತ್ತಿನ ಹಿಂದೆ ಬಿದ್ದಿರುವುದು ನಿಜಕ್ಕೂ ವಿಪರ್ಯಾಸ. ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠ