‘
ಬೆಳಗಾವಿ: ‘ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮತ್ತು ಲಿಂಗಾಯತ ಉಪ ಸಮುದಾಯಗಳಿಗೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಕೈಗೊಳ್ಳಲಿರುವ ಎಂಟನೇ ಹಂತದ ಹೋರಾಟಕ್ಕೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ಜನವರಿ 14ರಂದು ಬೆಳಿಗ್ಗೆ 11ಕ್ಕೆ ಚಾಲನೆ ಕೊಡಲಾಗುವುದು’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿಗಾಗಿ ವಿವಿಧ ಹಂತಗಳಲ್ಲಿ ನಾವು ಹೋರಾಡಿದ್ದೇವೆ. 2024ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆದಾಗ, ಸರ್ಕಾರ ಕುಮ್ಮಕ್ಕಿನಿಂದ ಪೊಲೀಸರು ನಮ್ಮ ಮೇಲೆ ಲಾಠಿಚಾರ್ಜ್ ಮಾಡಿ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದರು. ಲಿಂಗಾಯತರ ಮೇಲೆ ಹಲ್ಲೆ ಮಾಡಿದ ಮೊದಲ ಸರ್ಕಾರ ಎಂಬ ಕುಖ್ಯಾತಿಗೂ ಕಾಂಗ್ರೆಸ್ ಸರ್ಕಾರ ಪಾತ್ರವಾಯಿತು. ಹಾಗಾಗಿ ಮಕರ ಸಂಕ್ರಾಂತಿಯಂದು ಎಂಟನೇ ಹಂತದ ಹೋರಾಟಕ್ಕೆ ಆರಂಭಿಸಿದ್ದೇವೆ. ಲಾಠಿಚಾರ್ಜ್ ವೇಳೆ ಗಾಯಗೊಂಡ ಹೋರಾಟಗಾರರಿಗೆ ‘ಲಿಂಗಾಯತ ಪಂಚಮಸಾಲಿ ಮೀಸಲಾತಿ ವೀರ’ ಎಂಬ ಬಸವರಕ್ಷೆ ಕೊಡುತ್ತೇವೆ’ ಎಂದರು.
‘ಈ ಸಲ ರಾಜ್ಯದಾದ್ಯಂತ ಹಳ್ಳಿ–ಹಳ್ಳಿಗಳಲ್ಲಿ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ಮಾಡುತ್ತೇವೆ. ಜನರ ಬಳಿ ಹೋಗಿ ಅಭಿಪ್ರಾಯ ಸಂಗ್ರಹಿಸಿ, ನಮ್ಮ ಗುರಿ ಸಾಧಿಸುತ್ತೇವೆ. ಪಂಚಮಸಾಲಿ ಸಮುದಾಯದವರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದ ಅವರು, ‘ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಫೆ.12ರಂದು ನೆರವೇರಿಸಲಾಗುವುದು’ ಎಂದರು.