ಜಿಲ್ಲೆ

ನಾಯಕನಹಟ್ಟಿ ಬಳಿ ಈಜಲು ತೆರಳಿದ್ದ ಬಾಲಕ ನೀರುಪಾಲು

ಹರ್ಷ ನ.ಪುರೋಹಿತ

ನಾಯಕನಹಟ್ಟಿ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಬಾಲಕ ಪಾಳು ಬಾವಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸಮೀಪದ ಕೋಡಿಹಳ್ಳಿಯಲ್ಲಿ ಸೋಮವಾರ ಸಂಭವಿಸಿದೆ.

ಕೋಡಿಹಳ್ಳಿ ಗ್ರಾಮದ ಬಾಲಾಜಿ (7) ಮೃತ ಬಾಲಕ. ತಳಕು ಸಮೀಪದ ಮನ್ವಂತರ ಶಾಲೆಯಲ್ಲಿ ಒಂದನೇ ತರಗತಿ ಉತ್ತೀರ್ಣನಾಗಿದ್ದನು. ರಜೆಯಿದ್ದರಿಂದ ತನ್ನ ಸ್ನೇಹಿತರೊಂದಿಗೆ ತಿರುಗಾಡಲು ಬಂದಿದ್ದ. ನನಗೆ ಈಜಲು ಬರುತ್ತದೆ ಎಂದು ಊರಿನ ಹೊರವಲಯದ ಕೆರೆ ಏರಿಗೆ ಹೊಂದಿಕೊಂಡಿರುವ ಪಾಳು ಬಾವಿಗೆ ಧುಮುಕಿದ್ದ. ಬಹಳ ಸಮಯ ಕಳೆದರೂ ಆತ ಮೇಲೆ ಬಾರದೇ ಇದ್ದಾಗ ಇತರೆ ಸ್ನೇಹಿತರು ಅವರ ಮನೆಗೆ ಮಾಹಿತಿ ನೀಡಿದ್ದಾರೆ.

ಹಾಳು ಬಾವಿಯಲ್ಲಿ 25 ಅಡಿಗೂ ಹೆಚ್ಚು ನೀರು ತುಂಬಿದೆ. ಬಾವಿಯಲ್ಲಿ ಜಾಲಿಗಿಡಗಳು ದಟ್ಟವಾಗಿದ್ದು, ನಾನಾ ಇಲಾಖೆ ಮತ್ತು ಗ್ರಾಮಸ್ಥರ ಹುಡುಕಾಟ ವ್ಯರ್ಥವಾಗಿದೆ. ಕೊಕ್ಕೆ ಬಿಟ್ಟು ಶವ ಮೇಲೆತ್ತಲು ಬಾಲಕನ ಮೈಮೇಲೆ ಬಟ್ಟೆಯಿಲ್ಲ.

ತಹಸೀಲ್ದಾರ್ ರೆಹಾನ್ ಪಾಷಾ, ಪಿಎಸ್​ಐ ಶಿವಕುಮಾರ್ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಬಾಲಕನ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಡೀಸೆಲ್ ಪಂಪ್ ಬಳಸಿ ನೀರನ್ನು ಹೊರ ಹಾಕುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಕೆರೆಯ ಏರಿಗೆ ಹೊಂದಿಕೊಂಡಿರುವುದರಿಂದ ನೀರು ಪಂಪ್ ಮಾಡಿದಂತೆ ಅಂತರ್ಜಲ ಬಾವಿಗೆ ಸೇರುತ್ತಿದೆ. ಹೀಗಾಗಿ ನೀರು ಖಾಲಿಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ವಿದ್ಯುತ್ ಸಂಪರ್ಕ ಮತ್ತು ಹೆಚ್ಚುವರಿ ಡೀಸೆಲ್ ಪಂಪ್​ಸೆಟ್ ಬಳಸಿ ನೀರು ಹೊರಹಾಕಲಾಗುತ್ತಿದೆ.