ಬೆಳಗಾವಿ:ಗುರು ಶಿಷ್ಯರ ನಡುವೆ ಅಜ್ಞಾನದ ಕತ್ತಲು, ಅಹಂಕಾರದ ಗೋಡೆ ಇರಬಾರದು. ಗುರು ತನ್ನ ಶಿಷ್ಯನ ಅಜ್ಞಾನ ಕಳೆಯಬೇಕು. ಶಿಷ್ಯ ಗುರುವಿನ ಮಾರ್ಗದರ್ಶನದಿಂದ ತನ್ನಲ್ಲಿನ ಅಜ್ಞಾನ, ಅಹಂಕಾರ ತೊರೆಯಬೇಕು. ಮೊದಲೆಲ್ಲ ಗುರುವೇ ನಮಃ ಎಂದು ಗುರುವನ್ನು ಭಕ್ತಿ, ಆಧರದಿಂದ ಗೌರವಿಸುತ್ತಿದ್ದರೆ, ಇಂದು ಗುರುವೇನೂ ಮಹಾ ಎಂದು ಪ್ರಶ್ನಿಸುವ ಪೀಳಿಗೆ ನಿರ್ಮಾಣವಾಗುತ್ತಿದೆ. ಆದರೆ ವ್ಯಕ್ತಿಯ ಸರ್ವಾಂಗಿನ ಅಭಿವೃದ್ಧಿ ಗುರುವಿನ ಕರುಣೆಯಿಂದ ಮಾತ್ರ ಸಾಧ್ಯ ಎಂದು ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ನಾಗನೂರು ರುದ್ರಾಕ್ಷಿ ಮಠ ಹಾಗೂ ಪ್ರಭುದೇವ ಪ್ರತಿಷ್ಠಾನ ಮಾತೃ ಮಂಡಳಿಯ ಸಹಯೋಗದೊಂದಿಗೆ ಗುರುಪೂರ್ಣಿಮೆಯ ನಿಮಿತ್ಯ ಆಯೋಜಿಸಿದ್ದ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡುತ್ತಾ ಮಾತನಾಡಿದರು.
ಗುರುಪೂರ್ಣಿಮೆ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ನಮ್ಮೆಲ್ಲರ ಧರ್ಮ ಭಾರತ ಧರ್ಮವಾಗಬೇಕು. ನಮ್ಮ ಕುಲ ಕನ್ನಡದ ಕುಲವಾಗಬೇಕು. ನಮ್ಮ ಯೋಗ ಕಾಯಕಯೋಗವಾಗಿ ನಮ್ಮ ಪಕ್ಷ ಭಕ್ತಿ ಪಕ್ಷವಾದರೆ ಇಡೀ ಭಾರತ ಸಾಮರಸ್ಯದಿಂದ ಕೂಡಿದ ಸದೃಢ ರಾಷ್ಟ್ರವಾಗುತ್ತದೆ ಎಂದರು.
ಸಮಾರಂಭದಲ್ಲಿ ಚಿಂತನ ನುಡಿಗಳನ್ನಾಡಿದ ಹಳಿಂಗಳಿ ಕಮರಿ ಮಠದ ಶಿವಾನಂದ ದೇವರು ಮಾತನಾಡಿ ಭಾರತ ಗುರುತ್ವವನ್ನು ವಿಶ್ವಕ್ಕೆ ಸಾರಿದ ರಾಷ್ಟ್ರ. ವಿದೇಶಗಳಲ್ಲಿ ಬೆರಳಣಿಕೆಯಷ್ಟು ಸಂತರಿದ್ದರೆ ಭಾರತದಲ್ಲಿ ಅಜ್ಞಾನ ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವ ಮಹಾನ್ ಗುರುಗಳು ಊರಿಗೊಬ್ಬರಿದ್ದಾರೆ. ಗುರು ಶಿವ ಪೂಜೆಯಿಂದ ಬಂದ ಪ್ರತಿಫಲವನ್ನು ಸಮಾಜಕ್ಕೆ ದಾರೆ ಎರೆಯಬೇಕು ಎಂದರು.
ಸಮಾರಂಭದಲ್ಲಿ ಸಮ್ಮುಖ ನುಡಿಗಳನ್ನಾಡಿದ ತುಂಗಳ ಸಿದ್ದಲಿಂಗ ಶಾಂಭವಿ ಆಶ್ರಮದ ಅನಸೂಯಾ ತಾಯಿಯವರು ಮಾತನಾಡಿ ಅಗಸ ನೀರಿನಲ್ಲಿ ಇದ್ದು ಬಾಯಾರಿ ಸತ್ತಂತೆ ಆಧ್ಯಾತ್ಮದ ಜ್ಞಾನ ಸಾಗರದಷ್ಟು ವಚನಗಳಲ್ಲಿದ್ದರೂ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ವ್ಯರ್ಥ ಜೀವನ ನಡೆಸುವವರು ಒಂದು ಸಾರಿ ವಚನ ಸಾಹಿತ್ಯವನ್ನು ಓದಬೇಕೆಂದರು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ಕುಮಾರ್ ಹಂಚಾಟೇ ಅವರನ್ನು ಸನ್ಮಾನಿಸಲಾಯಿತು.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಕೆ.ಬಿ.ಹಿರೇಮಠ, ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್ಮನ್ ಎಫ್.ವಿ. ಮಾನ್ವಿ, ಪ್ರಾಚಾರ್ಯ ಬಿ. ಆರ್. ಪಟಗುಂದಿ,ಮಾಜಿ ನಗರ ಸೇವಕಿ ಸರಳಾ ಹೇರೆಕರ್, ಬಿ. ವೈ. ಬೆಂಡಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಪ್ರಭುದೇವ ಪ್ರತಿಷ್ಠಾನ ಮಾತೃ ಮಂಡಳಿಯ ತಾಯಂದಿರು ಹಾಗೂ ನಾಗನೂರು ರುದ್ರಾಕ್ಷಿ ಮಠದ ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ವಚನ ಪ್ರಾರ್ಥನೆ ಜರುಗಿತು. ಪ್ರಾಚಾರ್ಯ ಎ.ಎಲ್. ಪಾಟೀಲ ಸ್ವಾಗತಿಸಿದರು. ರಾಜಶೇಖರ ಪಾಟೀಲ ನಿರೂಪಿಸಿ ವಂದಿಸಿದರು.