ಶಿಗ್ಗಾಂವಿ: ಚುನಾವಣಾ ಕರ್ತವ್ಯ ಮುಗಿಸಿ ಮತಪೆಟ್ಟಿಗೆಗಳೊಂದಿಗೆ ಮಸ್ಟರಿಂಗ್ ಕೇಂದ್ರಕ್ಕೆ ರಾತ್ರಿ ಆಗಮಿಸಿದ ನೌಕರರಿಗೆ ತಾಲೂಕು ಆಡಳಿತದ ವತಿಯಿಂದ ಭಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಭಾನುವಾರ ಶಾಂತಿಯುತವಾಗಿ ಚುನಾವಣೆ ಮುಗಿಸಿ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ 1500ಕ್ಕೂ ಅಧಿಕ ಸಿಬ್ಬಂದಿ, ಮತಪೆಟ್ಟಿಗೆಗಳನ್ನು ಸ್ಟ್ರಾಂಗ್ ರೂಮ್ೆ ಒಪ್ಪಿಸಿ, ಬಳಿಕ ಭೋಜನ ಕೂಟದಲ್ಲಿ ಕಡ್ಲಿ ಬೇಳೆ ಹುಗ್ಗಿ, ಪಾಯಸ, ಬದನೆಕಾಯಿ ಪಲ್ಲೆ, ಅನ್ನ, ಸೊಪ್ಪಿನ ಸಾರು ಸವಿದರು.
ಡಿ. 26ರಂದು ಪಟ್ಟಣದ ಜೆಎಂಜೆ ಕಾಲೇಜ್ನ ಮಸ್ಟರಿಂಗ್ ಕೇಂದ್ರದಲ್ಲಿ ಸಮರ್ಪಕ ಊಟದ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ, ನೌಕರರು ಪ್ರತಿಭಟನೆ ನಡೆಸಿದ್ದರು.
ನಂತರ ಸ್ಥಳಕ್ಕಾಗಮಿಸಿದ್ದ ಜಿಲ್ಲಾ ಚುನಾವಣಾ ವೀಕ್ಷಕ ಡಾ. ನಾಗೇಂದ್ರ ಹೊನ್ನಳ್ಳಿ, ಎಡಿಸಿ ಯೋಗಿಶ್ವರ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದರು. ಚುನಾವಣೆ ಮುಗಿಸಿಕೊಂಡು ಬರುವಾಗ ಎಲ್ಲ ಸಿಬ್ಬಂದಿಗೆ ಉತ್ತಮ ಊಟದ ವ್ಯವಸ್ಥೆ ಮಾಡಲಾಗುವುದು ಎಂದಿದ್ದರು. ಮಾತಿನಂತೆ ಭಾನುವಾರ ರಾತ್ರಿ ಕರ್ತವ್ಯ ಮುಗಿಸಿಕೊಂಡು ಬಂದ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ತಹಸೀಲ್ದಾರ್ ಪ್ರಕಾಶ ಕುದರಿ, ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್ಐ ಸಂತೋಷ ಪಾಟೀಲ, ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಆರ್.ಐ ಎಮ್ಆರ್.ನಾಯಕ, ಶಿವಾನಂದ ಅಜ್ಜಂಪುರ, ಐ.ಎಂ. ಪಾಟೀಲ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಳ್ಳದಿದ್ದರೂ ದುರುದ್ದೇಶದಿಂದ ಊಟದ ಅವ್ಯವಸ್ಥೆ ನೆಪ ಒಡ್ಡಿ ಪ್ರತಿಭಟನೆಗಿಳಿದ ಶಿಕ್ಷಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಬಿಇಒ ಕಚೇರಿಗೆ ಮಾಹಿತಿ ನೀಡುವಂತೆ ಪತ್ರ ಬರೆಯಲಾಗುವುದು. | ಪ್ರಕಾಶ ಕುದರಿ ತಹಶೀಲ್ದಾರ್ ಶಿಗ್ಗಾಂವಿ