ಜಿಲ್ಲೆ

ಸಿಹಿ ಜೋಳದ ಬೆಲೆ ಕುಸಿತ

ಕೋಲಾರ ಡೆಸ್ಕ್

ಕೋಲಾರ: ಸಿಹಿ ಜೋಳದ ತೆನೆ ಬೆಲೆ ದಿಢೀರನೆ ಮಾರುಕಟ್ಟೆಯಲ್ಲಿ ಕುಸಿದಿರುವ ಕಾರಣ ರೈತರು ಆತಂಕಕ್ಕೆ ಒಳಗಾಗುವಂತಾಗಿದೆ. ಪ್ರತಿ ಕೆಜಿಗೆ 5 ರಿಂದ 6 ರೂ.ಗಳ ತನಕ ಮಾರಾಟವಾಗುತ್ತಿದ್ದು ಹಾಕಿದ ಬಂಡವಾಳವೂ ರೈತನಿಗೆ ಸಿಗದಂತಾಗಿದೆ.

ಕೋಲಾರ ಜಿಲ್ಲೆಯಲ್ಲಿ ಟೊಮ್ಯಾಟೊ, ಆಲೂಗಡ್ಡೆ, ಕ್ಯಾಪ್ಸಿಕಂ ಸೇರಿ ಹೆಚ್ಚು ತರಕಾರಿ ಬೆಳೆ ಬೆಳೆಯುತ್ತಾರೆ. ಇವುಗಳ ಬೆಲೆ ದಿಢೀರನೆ ಕುಸಿದರೆ ಲಕ್ಷ ಲಕ್ಷ ರೂ. ಬಂಡವಾಳ ಹಾಕಿದ ರೈತ ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆ. ಈ ರೀತಿಯ ಉದಾಹರಣೆಗಳು ಸಾಕಷ್ಟು ಇದ್ದು, ರೈತ ಆರ್ಥಿಕವಾಗಿ ಮುನ್ನಡೆಯಲು ಸಾಧ್ಯವಾಗದೆ ಬೀದಿಗೆ ಬೀಳುವಂತಹ ಪರಿಸ್ಥಿತಿ ಒದಗಿ ಬಂದಿವೆ.

ಬಂಡವಾಳ ಕಡಿಮೆ ಮತ್ತು ಔಷಧಗಳ ಸಿಂಪಡಣೆ ಕಡಿಮೆ ಎಂದು ಇತ್ತೀಚೆಗೆ ರೈತರು ಸಿಹಿ ಜೋಳ ಬೆಳೆಯಲು ಮುಂದಾಗಿದ್ದಾರೆ. ಪ್ರತಿ ಕೆ.ಜಿ.ಗೆ 13 ರಿಂದ 20 ರೂ.ಗಳ ತನಕ ಮಾರಾಟವಾಗುತ್ತಿತ್ತು. ಈಗ ಬೇಡಿಕೆಗಿಂತ ಹೆಚ್ಚು ಬೆಳೆ ಬೆಳೆದ ಕಾರಣ ಮಾರುಕಟ್ಟೆಯಲ್ಲಿ ದಿಢೀರನೆ ಸಿಹಿ ಜೋಳದ ತೆನೆ ಬೆಲೆ ಕುಸಿದಿದೆ.

ಜೋಳದ ತೆನೆಗಿಂತ ಜೋಳದ ಸಪ್ಪೆ ಬೆಲೆಯೇ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಹೈನುಗಾರಿಕೆ ಹೆಚ್ಚಾಗಿರುವ ಕಾರಣ ಜೋಳದ ಸಪ್ಪೆಯನ್ನು ಸೀಮೆ ಹಸುಗಳಿಗೆ ಉಪಯೋಗಿಸುತ್ತಿರುವುದರಿಂದ ಒಂದು ಜೋಳದ ಸಪ್ಪೆ 1 ರೂ.ಗಳಿಂದ 1.25 ಪೈಸೆ ತನಕ ಮಾರಾಟವಾಗುತ್ತಿದೆ.

ಸಿಹಿ ಜೋಳದ ಸಸಿಯನ್ನು 80 ಪೈಸೆ ಯಿಂದ 1 ರೂ.ಗಳ ತನಕ ನರ್ಸರಿ ಮಾಲೀಕರು ಮಾರಾಟ ಮಾಡುತ್ತಿದ್ದಾರೆ. 1 ಎಕರೆಗೆ 25 ಸಾವಿರ ಸಸಿಗಳನ್ನು ನಾಟಮಾಡಬೇಕಾಗುತ್ತದೆ. ಗೊಬ್ಬರ ಔಷಧ ಸೇರಿ ಒಂದು ಎಕರೆ ಸಿಹಿ ಜೋಳ ಬೆಳೆಯಲು 75 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳ ತನಕ ಖರ್ಚು ಬರುತ್ತದೆ.

ಬೆಲೆ ಕುಸಿದ ಕಾರಣ ರೈತನಿಗೆ ಜೋಳದ ತೆನೆ ಮತ್ತು ಸಪ್ಪೆ ಎರಡನ್ನು ಮಾರಾಟ ಮಾಡಿದರೂ, 50 ಸಾವಿರ ರೂ.ಗಳು ರೈತನ ಕೈಗೆ ಸೇರುತ್ತಿಲ್ಲ. ಇದರಿಂದ ರೈತ ಕಂಗಾಲಾಗಿದ್ದಾನೆ.

ಇತ್ತೀಚೆಗೆ ಸಿಹಿ ಜೋಳ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಆದ ಕಾರಣ ಸಿಹಿ ಜೋಳದ ತೆನೆ ಬೆಲೆ 5 ರೂ.ಗಳಿಗೆ ಕುಸಿಯುವಂತಾಗಿದೆ. ರೈತನಿಗೆ ಕಡಿಮೆ ಬಂಡವಾಳ ಬೆಳೆ ಇದಾಗಿರುವ ಕಾರಣ ಆರ್ಥಿಕವಾಗಿ ಹಿನ್ನಡೆ ಇರುವ ರೈತ ಸಿಹಿ ಜೋಳ ಬೆಳೆಯುತ್ತಾನೆ. ಕನಿಷ್ಠ 10 ರೂ.ಗಳಿಗಿಂತ ಕಡಿಮೆ ಇಲ್ಲದೆ ಮಾರಾಟವಾದರೆ ರೈತನಿಗೆ ಬಂಡವಾಳ ಬರುತ್ತದೆ. ಸರ್ಕಾರ ರೈತನಿಗೆ 5 ರೂ.ಗಳಷ್ಟು ಬೆಂಬಲ ಬೆಲೆ ನೀಡಿದರೆ ರೈತ ಸುಧಾರಣೆಯಾಗುತ್ತಾನೆ.

 -ರವಿ, ಸಿಹಿ ಜೋಳ ಬೆಳೆಗಾರ

ಸಿಹಿ ಜೋಳದ ತೆನೆ ಬೆಲೆ ಕಳೆದ 10 ವರ್ಷಗಳಿಂದ ಈ ರೀತಿಯಾಗಿ ಕುಸಿದಿಲ್ಲ. ಪ್ರತಿ ಕೆಜಿ ಬೆಲೆ 10 ರೂ.ಗಳಿಗಿಂತಲೂ ಹೆಚ್ಚಾಗಿ ಮಾರಾಟವಾಗುತ್ತಿತ್ತು. ಇತ್ತೀಚೆಗೆ ಬೆಳೆಗಾರರ ಸಂಖ್ಯೆ ಹೆಚ್ಚಾದ ಕಾರಣ ದಿಢೀರನೆ ಬೆಲೆ ಕುಸಿದಿದೆ. ಸಿಹಿ ಜೋಳವನ್ನು ಹೆಚ್ಚಾಗಿ ತಿನ್ನಲು ಬಳಸುತ್ತಾರೆ. ಜೋಳ ಮಾಡಿ ಮಾರಾಟ ಮಾಡುವವರ ಸಂಖ್ಯೆ ಕಡಿಮೆ. ಜೋಳ ಮಾಡಿದರೆ ರೈತನಿಗೆ ನಷ್ಟ ಎಂದು ತಿನ್ನಲು ಮಾರಾಟ ಮಾಡುತ್ತಾರೆ. ತಿನ್ನುವವರ ಸಂಖ್ಯೆಗಿಂತ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ.

 -ಮಂಜು, ರೈತ, ತೆರ್ನಹಳ್ಳಿ.