ಸೋಮವಾರಪೇಟೆ: ತಾಲೂಕಿನ 12 ಸಾವಿರ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸುವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಅವರು ಕುಂಬೂರು ಸರ್ಕಾರಿ ಶಾಲೆಯಲ್ಲಿ ಸೋಮವಾರ ಚಾಲನೆ ನೀಡಿದರು.
ರಂಜನ್ ಅವರು ತಮ್ಮ ಸ್ನೇಹಿತರೊಬ್ಬರ ಸಹಕಾರದಿಂದ 30 ಸಾವಿರ ಸ್ವೆಟರ್‌ಗಳನ್ನು ದೆಹಲಿಯಿಂದ ತರಿಸಿದ್ದು, ಜಿಲ್ಲೆಯ ಮೂರು ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲು ಕ್ರಮ ಕೈಗೊಂಡಿದ್ದಾರೆ.
ಅದರಂತೆ ಇಂದು ಸುಮಾರು 2 ಸಾವಿರ ಸ್ವೆಟರ್‌ಗಳನ್ನು ಸೋಮವಾರಪೇಟೆ ಭಾಗದಲ್ಲಿ ವಿತರಿಸಲಾಯಿತು. ತಾಲೂಕಿನ ಕುಂಬೂರು, ಹೊಸತೋಟ, ಐಗೂರು, ಕಾಜೂರು, ಬಜೆಗುಂಡಿ, ಚೌಡ್ಲು, ದೊಡ್ಡಮಳ್ತೆ ಸೇರಿದಂತೆ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ ಸರ್ಕಾರಿ ಶಾಲೆಗಳ 2 ಸಾವಿರ ವಿದ್ಯಾರ್ಥಿಗಳಿಗೆ ವಿತರಿಸಿದರು.
ಫೆ.18ರಂದು ಗೌಡಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ಬೆಸೂರು, ಹಂಡ್ಲಿ, ನಿಡ್ತ, ಆಲೂರು ಸಿದ್ದಾಪುರ, ಹೆಬ್ಬಾಲೆ, ಶಿರಂಗಾಲ, ತೊರೆನೂರು, ಕೂಡ್ಲೂರು, ಕೂಡುಮಂಗಳೂರು, ಮುಳ್ಳುಸೋಗೆ ಸೇರಿದಂತೆ ಇತರ ಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸ್ವೆಟರ್ ವಿತರಣೆ ಮಾಡಲಾಗುವುದು ಎಂದು ರಂಜನ್ ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ 13 ಸಾವಿರ, ವೀರಾಜಪೇಟೆಗೆ 9, ಮಡಿಕೇರಿ ತಾಲೂಕಿನಲ್ಲಿ 8 ಸಾವಿರ ವಿದ್ಯಾರ್ಥಿಗಳಿಗೆ ಸ್ವೆಟ್ಟರ್ ವಿತರಣೆ ಮಾಡಲಾಗುವುದು. ಉತ್ತಮ ಗುಣಮಟ್ಟದ ಸ್ವೆಟರ್‌ಗಳನ್ನು ನೀಡಲಾಗುತ್ತಿದ್ದು, ಮಳೆ ಹಾಗು ಚಳಿಗಾಲದಲ್ಲಿ ಮಕ್ಕಳಿಗೆ ಉಪಯೋಗಕ್ಕೆ ಬರಲಿದೆ ಎಂದು ಅಪ್ಪಚ್ಚು ರಂಜನ್ ತಿಳಿಸಿದರು.
ಪ್ರಮುಖರಾದ ಎಂ.ಬಿ. ಅಭಿಮನ್ಯುಕುಮಾರ್, ಎಸ್.ಆರ್. ಸೋಮೇಶ್, ಶರತ್‌ಚಂದ್ರ, ದರ್ಶನ್, ಮಹೇಶ್, ಆದಿ ಸೇರಿದಂತೆ ಇತರರು ಇದ್ದರು.