ವಿಜಯಪುರ: ಶ್ರೀಕ್ಷೇತ್ರ ಶ್ರವಣಬೆಳಗೊಳದ ಮಠಕ್ಕೆ ನೂತನವಾಗಿ ಪೀಠಾಧ್ಯಕ್ಷರಾಗಿ ಆಯ್ಕೆಯಾಗಿರುವ ಪರಮಪೂಜ್ಯ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಶುಕ್ರವಾರ ವಿಜಯಪುರ ಮಹಾನಗರದಲ್ಲಿ ‘ಪುರ ಪ್ರವೇಶ’ ಮಾಡಿದರು.
ಅದ್ದೂರಿಯಾಗಿ ಸ್ವಾಗತಿಸಿಕೊಂಡ ವಿಜಯಪುರ ನಗರದ ಜನತೆ ಬೃಹತ್ ಮೆರವಣಿಗೆ ನಡೆಸಿದರು. ನಗರದ ಟೋಲ್ ನಾಕಾ ಬಳಿ ನೂರಾರು ಯುವಕರು ಪೂಜ್ಯರನ್ನು ಬರಮಾಡಿಕೊಂಡು ಬೈಕ್ ರ‌್ಯಾಲಿ ಮೂಲಕ ನಗರ ಪ್ರದಕ್ಷಿಣೆ ನಡೆಸಿದರು. ಬಳಿಕ ಸಹಸ್ರಪಣಿ ಪಾರ್ಶ್ವನಾಥ ಮಂದಿರಕ್ಕೆ ಕರೆತರಲಾಯಿತು. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ಭಾಗವಹಿಸಿದ್ದರು. ಅಲ್ಲದೆ ಸಾವಿರಾರು ಶ್ರಾವಕ-ಶ್ರಾವಕಿಯರು ಮೆರಗು ನೀಡಿದರು.
ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಿ ಪೂಜ್ಯರ ಆಶೀರ್ವಾದ ಪಡೆದರು. ಅಜಿತ್ ಕುಚಿನೂರು, ಪ್ರಕಾಶ ಗೊಂಗಡಿ, ಪ್ರವೀಣ ಕಾಸಾರ, ರಾಹುಲ ಗೊಂಗಡಿ, ಸಂತೋಷ ಕೌಟೇಕರ, ಸುಶೀಲ ಬೆಳಗಲಿ, ಕರ್ನಾಟಕ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷ ಶೀತಲ್ ಪಾಟೀಲ, ಬಾಹುಬಲಿ ಶಿರೋಳ, ವರ್ಧಮಾನ್ ನ್ಯಾಮಗೌಡ, ಬಾಹುಬಲಿ ಬುತ್ತಿ, ಅಪ್ಪಾಸಾಹೇಬ ಮುತ್ತಿನ ಮತ್ತಿತರರಿದ್ದರು.