ಜಿಲ್ಲೆ

ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿ ಸ್ವರೂಪ್ ಪ್ರಕಾಶ್ ಆಯ್ಕೆ

ಹಾಸನ: ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿ ಶಾಸಕ ಸ್ವರೂಪ್ ಪ್ರಕಾಶ್ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಸುರೇಶ್ ಹಾಗೂ 13 ನಿರ್ದೇಶಕರ ಬಲದೊಂದಿಗೆ ಮತ್ತೆ ಸಂಜೀವಿನಿ ಸಹಕಾರಿ ಆಸ್ಪತ್ರೆಯ ಅಭಿವೃದ್ಧಿಗೆ ನೂತನ ತಂಡ ಆಯ್ಕೆಯಾಗಿದೆ. ಶಾಸಕ ಸ್ವರೂಪ ಪ್ರಕಾಶ್ ಮಾತನಾಡಿ, ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. 1988ರಲ್ಲಿ ಸ್ಥಾಪನೆಗೊಂಡು ಈವರೆಗೆ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಈ ಸಂಸ್ಥೆಗೆ ದಿವಂಗತ ಡಾ. ಗುರುರಾಜ್ ಹೆಬ್ಬಾರ್, ಡಾ.ಮುನಿವೆಂಕಟೇಗೌಡ, ದಿ.ಎಚ್.ಎಸ್ ಪ್ರಕಾಶ್ ಸೇರಿದಂತೆ ಹಲವರು ಭದ್ರಬುನಾದಿ ಹಾಕಿ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.

ಕಳೆದ ಬಾರಿಯ 8 ನಿರ್ದೇಶಕರು ಈ ಬಾರಿಯೂ ಮುಂದುವರಿದಿದ್ದು, ಇನ್ನುಳಿದ ಐದು ಜನ ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಎಲ್ಲ ನಿರ್ದೇಶಕರ ಹಾಗೂ ಷೇರುದಾರರ ಸಹಕಾರದಿಂದ ಮತ್ತೆ ಎರಡನೇ ಬಾರಿಗೆ ಸಂಸ್ಥೆಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಹಲವರ ಶ್ರಮದಿಂದ ಸಂಸ್ಥೆ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದ್ದು, ನಮ್ಮ ಅವಧಿಯಲ್ಲಿ ಕೂಡ ಕೆ.ಆರ್.ಪುರಂನಲ್ಲಿ ನಿವೇಶನ ಖರೀದಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಆ ಜಾಗದಲ್ಲಿ ಹೃದಯ ರೋಗಿಗಳಿಗೆ ಸಂಬಂಧಪಟ್ಟ ಆಸ್ಪತ್ರೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಜತೆಗೆ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೂ ತಯಾರಿ ನಡೆದಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಸಲುವಾಗಿ ಶ್ರಮವಹಿಸುವುದಾಗಿ ಹೇಳಿದರು.