ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆರಂಭಿಸಿದ ಸ್ವರ್ಣಾಲಯದಲ್ಲಿ ಜಿಎಸ್​ಟಿ ಕಮಿಷನರ್​ ಡಾ.ಕುಮಾರ್​ ನಾಯಕ್​ ಹಾಗೂ ಉಡುಪಿ ಜುವೆರ್ಲಸ್​ ಅಸೋಸಿಯೇಷನ್​ ಅಧ್ಯಕ್ಷ ವಸಂತ್​ ಅವರು ಪ್ರಥಮ ಸ್ವರ್ಣ ಖರೀದಿ ಮಾಡಿದರು. ಪುತ್ತಿಗೆ ಸುಗುಣೇಂದ್ರ ಶ್ರೀಪಾದರು, ವಿದ್ಯೇಶ ತೀರ್ಥ ಶ್ರೀಪಾದರು, ಪುತ್ತಿಗೆ ಕಿರಿಯ ಶ್ರೀ ಸುಶೀಂದ್ರ ಶ್ರೀಪಾದರು, ಪ್ರಸನ್ನ ಆಚಾರ್ಯ ಇತರರಿದ್ದರು. 
ಜಿಲ್ಲೆ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಸ್ವರ್ಣಾಲಯ ಉದ್ಘಾಟನೆ

ಸ್ವರ್ಣರಥ ನಿರ್ಮಾಣ ನಿಮಿತ್ತ ದೇಣಿಗೆ ಕೌಂಟರ್​ ಆರಂಭ

ಉಡುಪಿ: ಶ್ರೀಕೃಷ್ಣನ 4ನೇ ಪರ್ಯಾಯದಲ್ಲಿರುವ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಗಳು ಈ ಬಾರಿ ಶ್ರೀಕೃಷ್ಣನಿಗೆ 18 ಕೋಟಿ ರೂ. ಮೌಲ್ಯದ 'ಪಾರ್ಥಸಾರಥಿ' ಹೆಸರಿನ ಸ್ವರ್ಣರಥ ನಿರ್ಮಿಸಿಕೊಡುವ ಸಂಕಲ್ಪ ಮಾಡಿದ್ದಾರೆ.

ಶ್ರೀಗಳ ಸಂಕಲ್ಪದ ಮುಂದುವರಿದ ಭಾಗವಾಗಿ ಶ್ರೀಕೃಷ್ಣನ ಸ್ವರ್ಣರಥಕ್ಕೆ ಬೇಕಾಗುವ ಚಿನ್ನವನ್ನು ಭಕ್ತರಿಗೆ ತಮ್ಮಶಕ್ತ್ಯಾನುಸಾರ ನೀಡಲು ಅನುಕೂಲವಾಗುವಂತೆ ಚಿನ್ನದ ನಾಣ್ಯ ಸಂಗ್ರಹದ ಸ್ವರ್ಣಾಲಯವನ್ನು ಭಂಡಾರಿಕೇರಿ ಮಠಾಧೀಶ ವಿದ್ಯೇಶ ತೀರ್ಥ ಶ್ರೀಪಾದರು ಪರ್ಯಾಯ ಶ್ರೀಪಾದರ ಅಪೇಕ್ಷೆಯಂತೆ ಗುರುವಾರ ಲೋಕಾರ್ಪಣೆ ಮಾಡಿದರು.

ಮೇ 10ರಂದು (ಇಂದು) ಅಕ್ಷಯ ತೃತೀಯಾದ ಪರ್ವ ದಿನದ ಹಿನ್ನೆಲೆಯಲ್ಲಿ ಮಠದ ಭಕ್ತರ ಕೋರಿಕೆಯಂತೆ ಈ ಕೌಂಟರ್​ ಆರಂಭಿಸಲಾಗಿದೆ.

ಶ್ರೀಕೃಷ್ಣನಿಗೆ ಸ್ವರ್ಣ 'ಪಾರ್ಥಸಾರಥಿ' ರಥಕ್ಕೆ ದೇಣಿಗೆ ನೀಡಬಯಸುವ ಭಕ್ತರು ಅಕ್ಷಯ ತೃತೀಯಾಯದ ಪರ್ವ ಕಾಲದಲ್ಲಿ ಸ್ವರ್ಣ ದಾನ ಮಾಡುವ ಮೂಲಕ ಅನ್ನಬ್ರಹ್ಮನಾದ ಹಾಗೂ ಗೀತಾಚಾರ್ಯನಾದ ಶ್ರೀಕೃಷ್ಣನ ಪರಮಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ಸುಗುಣೇಂದ್ರ ಶ್ರೀಪಾದರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಎಸ್​ಟಿ ಕಮಿಷನರ್​ ಡಾ . ಕುಮಾರ್​ ನಾಯಕ್​ ಮತ್ತು ಉಡುಪಿ ಜುವೆರ್ಲಸ್​ ಅಸೋಸಿಯೇಷನ್​ ಅಧ್ಯಕ್ಷ ವಸಂತ್​ ಉಪಸ್ಥಿತರಿದ್ದರು. ಅಲ್ಲದೆ, ಪ್ರಥಮ ಸ್ವರ್ಣ ಖರೀದಿ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.

ಪುತ್ತಿಗೆ ಕಿರಿಯ ಸ್ವಾಮೀಜಿ ಸುಶೀಂದ್ರ ತೀರ್ಥ ಶ್ರೀಪಾದರು, ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ದಿವಾನ ನಾಗರಾಜ ಆಚಾರ್ಯ ಇತರರಿದ್ದರು.