ಜಿಲ್ಲೆ

ಶೈಕ್ಷಣಿಕ ಜಾಗೃತಿಗಾಗಿ ಸ್ವರ್ಣ ಪಾದುಕಾ ಸಂಚಾರ

ವೀರೇಶ ಸೌದ್ರಿ

ಗೋಕರ್ಣ: ಸನಾತನ ಭಾರತೀಯ ಗುರುಕುಲ ಶಿಕ್ಷಣ ಪದ್ಧತಿ ಬಗ್ಗೆ ಸಮಾಜದಲ್ಲಿ ಅರಿವಿನ ಕೊರತೆಯಿದೆ. ಭಾರತೀಯತೆಯ ಪುನರುತ್ಥಾನಕ್ಕಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಲು ಚಾತುರ್ಮಾಸ್ಯದ ಬಳಿಕ ಶ್ರೀಮಠದ ಸ್ವರ್ಣ ಪಾದುಕಾ ಸಂಚಾರ ಪ್ರಾರಂಭಿಸಲಾಗುವುದು ಎಂದು ಸಂಘಟನಾ ಚಾತುರ್ಮಾಸ್ಯ ವ್ರತ ನಿರತ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

ಹೆಗಡೆ, ಮೂರೂರು-ಕಲ್ಲಬ್ಬೆ ಮತ್ತು ವಾಲಗಳ್ಳಿ ವಲಯಗಳ ಶಿಷ್ಯಭಕ್ತರಿಂದ ಶುಕ್ರವಾರ ಭಿಕ್ಷಾಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಮುಂದಿನ 1 ವರ್ಷದ ಅವಧಿಯಲ್ಲಿ ಪುಣ್ಯ ಸ್ವರ್ಣ ಪಾದುಕೆಗಳು ಕರ್ನಾಟಕದ ವಿವಿಧ ವಲಯ, ಕೇರಳವರೆಗೆ ವ್ಯಾಪಿಸಿರುವ ಗೋಕರ್ಣ ಮಂಡಲಾದ್ಯಂತ ಸಂಚರಿಸಿ ಪೂಜಾಸೇವೆ ಸ್ವೀಕರಿಸಲಿವೆ. ಪೂಜೆ ಸಂಘಟಿತವಾಗುವ ಎಲ್ಲೆಡೆ ವಿಶ್ವವಿದ್ಯಾಲಯದ ಬಗ್ಗೆ ಜಾಗೃತಿ ಸಭೆ ಏರ್ಪಡಿಸಲಾಗುವುದು. ಇಂತಹ 1800 ಸಭೆ ಆಯೋಜಿಸಲು ನಿರ್ಧರಿಸಲಾಗಿದೆ. ಈ ಸಂಚಾರ ಪರ್ವದಲ್ಲಿ ಪಾದುಕೆಗೆ ಸಮರ್ಪಿತ ಸಮಸ್ತ ಕಾಣಿಕೆಗಳು ವಿವಿಯ ನಿರ್ವಹಣೆ ಮತ್ತು ಅಭಿವೃದ್ಧಿಗೆ ಬಳಕೆಯಾಗಲಿದೆ. ಈ ಸಂಚಾರ ಕುಮಟಾ ಮಂಡಲದಿಂದ ಪ್ರಾರಂಭವಾಗಿ ಸಮಾಜದಲ್ಲಿ ನವನವೀನ ಜ್ಞಾನ ಜ್ಯೋತಿಯನ್ನು ಬೆಳಗಿಸಲು ಕಾರಣವಾಗಲಿದೆ ಎಂದು ಶ್ರೀಗಳು ಹೇಳಿದರು.

ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಪ್ರಾಂತ ಉಪಾಧ್ಯಕ್ಷ ಜಿ.ಎಸ್. ಹೆಗಡೆ, ಕುಮಟಾ ಮಂಡಲಾಧ್ಯಕ್ಷ ಸುಬ್ರಾಯ ಭಟ್ಟ ಕೋಣಾರೆ, ಕಾರ್ಯದರ್ಶಿ ರವೀಂದ್ರ ಭಟ್ಟ ಸೂರಿ ಇತರರಿದ್ದರು. ಸುಬ್ರಾಯ ಅಗ್ನಿಹೋತ್ರಿ ಮತ್ತು ವಿನಾಯಕ ಶಾಸ್ತ್ರಿ ನಿರ್ವಹಿಸಿದರು.