ಪಾಂಡವಪುರ: ಗ್ರಾಮಗಳ ಅಭಿವೃದ್ಧಿ, ಮಹಿಳೆಯರ ಆರ್ಥಿಕ ಸಬಲೀಕರಣ, ಯುವ ಸಮುದಾಯ ಗುಳ್ಳೆ ಹೋಗದಂತೆ ತಡೆಯುವುದು, ಶಿಕ್ಷಣ, ಸ್ಥಳೀಯ ಆರ್ಥಿಕತೆ, ಆರೋಗ್ಯ, ಪ್ರವಾಸೋದ್ಯಮ, ಕೃಷಿ, ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಇತರ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಶನಿವಾರ ಸ್ವರಾಜ್ ಉತ್ಸವ ಆಯೋಜಿಸಲಾಗಿತ್ತು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಬೃಹತ್ ಟೆಂಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರ ಮತ್ತು ಸರ್ಕಾರೇತರ ಮೂವತ್ತಕ್ಕೂ ಹೆಚ್ಚು ಸಂಸ್ಥೆಗಳ ಪ್ರತಿನಿಧಿಗಳು ನಮ್ಮ ಹಳ್ಳಿ ನಮ್ಮ ಹೆಮ್ಮೆ, ನಮ್ಮ ಬದುಕು ನಮ್ಮ ಕೈಯಲ್ಲಿ, ನಮ್ಮ ಕನಸು ಸ್ವಾವಲಂಬಿ ಬದುಕಿನೆಡೆಗೆ, ನಮ್ಮ ಗ್ರಾಮ ನಮ್ಮ ಶಕ್ತಿ ಹಾಗೂ ನಮ್ಮ ನಡೆ ಸ್ವರಾಜ್ಯ ಗ್ರಾಮದೆಡೆಗೆ ಎಂಬ ಪರಿಕಲ್ಪನೆಯಡಿ ತಾಂತ್ರಿಕತೆಯೊಂದಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದರು.
ಒಂದು ಕಾರ್ಯಕ್ರಮ ಹಲವು ಆಲೋಚನೆ: ಗ್ರಾಮಗಳು ಉದ್ಧಾರವಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಮಹಾತ್ಮ ಗಾಂಧೀಜಿ ಅವರ ಆಲೋಚನೆಯ ತಳಹದಿಯ ಮೇಲೆ ಪುಟ್ಟಣ್ಣಯ್ಯ ಫೌಂಡೇಷನ್ ಮತ್ತು ಸೆಲ್ಕೊ ಫೌಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಸ್ವರಾಜ್ ಉತ್ಸವದಲ್ಲಿ, ಗ್ರಾಮಗಳ ಆರ್ಥಿಕ ಬಲವರ್ಧನೆಗೆ ಏನು ಮಾಡಬೇಕು? ಮಹಿಳೆಯರ ಸ್ವಾವಲಂಬನೆ ಬದುಕಿಗೆ ಅಗತ್ಯವಾದ ಯೋಜನೆ, ಕೃಷಿ ಪದ್ಧತಿ ಸುಧಾರಣೆ, ಸ್ವ ಉದ್ಯೋಗ ಸೃಷ್ಟಿ, ಯುವ ಜನ ಉದ್ಯಮಶೀಲತೆ, ಆರೋಗ್ಯ ಸುಧಾರಣೆ, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಲಿಂಗ ಸಮಾನತೆ, ಸಾಮೂಹಿಕ ಸಂಪನ್ಮೂಲ, ಆದಾಯಕ್ಕಾಗಿ ಪರ್ಯಾಯ ಕೃಷಿ, ಸಶಕ್ತ ಪಂಚಾಯಿತಿ ಸಮಗ್ರ ಅಭಿವೃದ್ಧಿ, ಸುಧಾರಿತ ಸಾರಿಗೆ, ಸಾವಯವ ಕೃಷಿ, ನಮ್ಮೂರ ರಚನೆ, ಸೌರ ಚಾಲಿತ ಯಂತ್ರೋಪಕರಣಗಳಿಂದ ಆಹಾರ ಉತ್ಪಾದನೆ, ಗುಡಿ ಕೈಗಾರಿಕೆ, ಸುಸ್ಥಿರ ಜೀವನೋಪಾಯಕ್ಕೆ ಪರಿಹಾರ ಇತ್ಯಾದಿಗಳ ಬಗ್ಗೆ ಪ್ರಾತ್ಯಕ್ಷಿಕೆ, ಕಿರುನಾಟಕ, ಚರ್ಚೆ, ಸಂವಾದದ ಮೂಲಕ ಸ್ವರಾಜ್ಯ ಚಿಂತನೆಯ ಹೊಸ ದಾರಿ ಕಂಡುಕೊಳ್ಳುವ ಪ್ರಯತ್ನ ಮಾಡಲಾಯಿತು.
ಪರಿಹಾರ ಹುಡುಕುವ ಯತ್ನ: ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸ್ವರಾಜ್ ಉತ್ಸವದ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಜನರೊಂದಿಗೆ ಮಾತನಾಡುವಾಗ ಸ್ಥಳೀಯವಾಗಿ ಜನರನ್ನು ಕಾಡುತ್ತಿರುವ ಸಮಸ್ಯೆಗಳ ಆಳ ಅರ್ಥವಾಗಿ ಹಲವು ಪ್ರಶ್ನೆಗಳು ಉದ್ಭವಿಸಿದವು. ಇದಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ಹಲವರು ಹಗಲಿರುಳು ಶ್ರಮಿಸಿದ್ದು, ಕಾರ್ಯಕ್ರಮದ ಉದ್ದೇಶ ಜನರಿಗೆ ತಲುಪಿದರೆ ಬದಲಾವಣೆ ಕಾಣಬಹುದಾಗಿದೆ. ಗಾಂಧೀಜಿ ಅವರ ಸ್ವರಾಜ್ಯ ಕಲ್ಪನೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಸುನೀತಾ ಪುಟ್ಟಣ್ಣಯ್ಯ, ಸ್ಮಿತಾ ಪುಟ್ಟಣ್ಣಯ್ಯ, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ವೈ.ಪಿ.ಮಂಜು, ನಂದಿನಿ ಜಯರಾಮ್ ಇತರರು ಭಾಗವಹಿಸಿದ್ದರು.
ಸಾವಯವ ಊಟ: ಕಾರ್ಯಕ್ರಮಕ್ಕೆ ಆಗಮಿಸಿದ 15 ಸಾವಿರಕ್ಕೂ ಹೆಚ್ಚು ಜನರಿಗೆ ಸಾವಯವ ಬೆಳೆಗಳಿಂದ ತಯಾರಿಸಿದ್ದ ಬಿಸಿಬೇಳೆ ಬಾತು, ಮೊಸರನ್ನ, ಬೆಲ್ಲದ ಪೊಂಗಲ್ ಉಣ ಬಡಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡೊಳ್ಳು, ವೀರಭದ್ರ ಕುಣಿತ, ಪೂರ್ಣಕುಂಭ ಕಳಸ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಐದು ದೀಪ ವೃತ್ತದಿಂದ ಪಾಂಡವ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಲಾಯಿತು. ಡೊಳ್ಳಿನ ತಾಳಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸ್ಮಿತಾ ಪುಟ್ಟಣ್ಣಯ್ಯ ರೈತ ಕಾರ್ಯಕರ್ತರೊಂದಿಗೆ ಕುಣಿದು ಕುಪ್ಪಳಿಸಿದರು.