ಉಳ್ಳಾಲ: ಮ್ಯಾಕ್ಸ್ ಕ್ರಿಯೇಷನ್ ಲಾಂಛನದಲ್ಲಿ ‘ಪ್ರೊಡಕ್ಷನ್ ನಂಬರ್ 1’ ಚಿತ್ರಕ್ಕೆ ಹರೇಕಳ ಸಂಪಿಗೆದಡಿ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಭಾನುವಾರ ಮುಹೂರ್ತ ನೆರವೇರಿತು.
ನಟ, ನಿರ್ದೇಶಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಚಿತ್ರಕ್ಕೆ ಕ್ಲಾಫ್ ಮಾಡಿದರು. ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಕ್ಯಾಮರಾಕ್ಕೆ ಚಾಲನೆ ನೀಡಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, ಉತ್ತಮ ಕಲಾವಿದರಾಗಿರುವ ಸ್ವರಾಜ್ ಶೆಟ್ಟಿ, ಶಿವಧೂತೆ ಗುಳಿಗ ನಾಟಕದಲ್ಲಿ ಅಭೂತಪೂರ್ವ ನಟನೆ ಮಾಡಿದ್ದಾರೆ. ಮೊದಲ ಬಾರಿಗೆ ಅವರು ಕಥೆ, ಚಿತ್ರಕಥೆ, ನಿರ್ದೇಶನದ ಜವಾಬ್ದಾರಿಯೊಂದಿಗೆ ಪೂರ್ಣ ಪ್ರಮಾಣದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ ಎಂದು ತಿಳಿಸಿದರು.
ನಿರ್ದೇಶಕ, ನಾಯಕ ನಟ ಸ್ವರಾಜ್ ಶೆಟ್ಟಿ ಮಾತನಾಡಿ, ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ. ಕಾಂತಾರ ಚಿತ್ರದ ಗುರುವ ಪಾತ್ರದ ಮೂಲಕ ಕನ್ನಡಿಗರು ನನ್ನನ್ನು ಗುರುತಿಸಿದ್ದಾರೆ. ಚಿತ್ರ ಸಂಪೂರ್ಣ ಕೌಟುಂಬಿಕ ಆಧಾರಿತವಾಗಿದ್ದು, ದಂಪತಿ ನಡುವಿನ ಪ್ರೇಮಕಥೆ ಹೊಂದಿದೆ. ಕಾಂತಾರ ಚಿತ್ರದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದು, 20-25 ದಿನ ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಎಂದರು.
ಚಿತ್ರದ ನಿರ್ಮಾಪಕ ಭಾಗ್ಯರಾಜ್ ಶೆಟ್ಟಿ, ನಟಿ ಶಿವಾನಿ ರೈ, ಪ್ರವೀಣ್ ಶೆಟ್ಟಿ, ಸಂಕಲನಕಾರ ಗಣೇಶ್ ನೀರ್ಚಾಲ್, ಕ್ಯಾಮರಾಮನ್ ರೂಪೇಶ್ ಷಾಜಿ, ಸಂಗೀತ ನಿರ್ದೇಶಕ ವಿನೋದ್ ರಾಜ್ ಕೋಕಿಲ, ಕಲಾ ನಿರ್ದೇಶಕ ರಾಜೇಶ್, ಸಹನಿರ್ದೇಶಕ ಮಹಾನ್ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ರಾಜೇಶ್ ಕುಡ್ಲ, ರಕ್ಷಾರಾಜ್ ಶೆಟ್ಟಿ, ರಾಧಾಕೃಷ್ಣ, ಪ್ರತಿಮಾ ರೈ ಸುದ್ದಿಗೋಷ್ಠಿಯಲ್ಲಿದ್ದರು.